ನವದೆಹಲಿ: ಪಂಜಾಬ್ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕಾಗಿ ಆಪ್ ಶಾಸಕ ಜರ್ನೈಲ್ ಸಿಂಗ್ ಅವರು ರಾಜೋರಿ ಕ್ಷೇತ್ರವನ್ನು ತೊರೆದಿದ್ದರಿಂದ ಅಲ್ಲಿನ ಜನೆ ತೀವ್ರ ಅಸಮಾಧಾನಗೊಂಡಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಶುಕ್ರವಾರ ಹೇಳಿದ್ದಾರೆ.
ಇತ್ತೀಚಿಗೆ ನಡೆದ ರಾಜೋರಿ ಉಪ ಚುನಾವಣೆಯಲ್ಲಿ ಎಎಪಿ ಠೇವಣಿ ಕಳೆದುಕೊಂಡಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿದ ಕೇಜ್ರಿವಾಲ್, ಜರ್ನೈಲ್ ಸಿಂಗ್ ಅವರು ರಾಜೋರಿ ಕ್ಷೇತ್ರ ಬಿಡಲು ಹಲವು ಕಾರಣಗಳಿದ್ದವು. ಅವರು ಸಿಖ್ ಸಮುದಾಯಕ್ಕಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ಆದರೆ ಅವರು ರಾಜೋರಿ ಕ್ಷೇತ್ರ ಬಿಟ್ಟು ರಾಜಸ್ಥಾನಕ್ಕೆ ಹೋಗಿದ್ದರಿಂದ ಕ್ಷೇತ್ರದ ಜನತೆ ತೀವ್ರ ಬೇಸರಗೊಂಡಿದ್ದಾರೆ. ಆದರೆ ಈ ಫಲಿತಾಂಶ ಏಪ್ರಿಲ್ 23ರಂದು ನಡೆಯಲಿರುವ ದೆಹಲಿ ಮಹಾನಗರ ಪಾಲಿಕೆಗಳ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳಿದ್ದಾರೆ.
ಜರ್ನೈಲ್ ಸಿಂಗ್ ಅವರು ತಮ್ಮ ಅವಧಿ ಪೂರೈಸುವ ಮುನ್ನವೇ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರ ಬಗ್ಗೆ ಕ್ಷೇತ್ರದ ಜನತೆಯಲ್ಲಿ ಅಸಮಾಧಾನವಿತ್ತು ಎಂಬ ಬಗ್ಗೆ ನನಗೆ ಮೊದಲೇ ಮಾಹಿತಿ ಇದ್ದು ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.
ರಾಜೋರಿ ಗಾರ್ಡನ್ ವಿಧಾನಸಭೆ ಉಪ ಚುನಾವಣೆಯ ಫಲಿತಾಂಶ ನಿನ್ನೆ ಹೊರ ಬಿದ್ದಿದ್ದು, ಬಿಜೆಪಿ-ಎಸ್ಎಡಿ ಅಭ್ಯರ್ಥಿ ಮಂಜಿಂದರ್ ಸಿಂಗ್ ಗೆಲುವು ಸಾಧಿಸಿದ್ದು, ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಹರ್ಜೀತ್ ಸಿಂಗ್ ಅವರು ಠೇವಣಿ ಕಳೆದುಕೊಳ್ಳುವ ಮೂಲಕ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ.