ದೇಶ

ಬಾಲಿವುಡ್ ನಟ ಸಂಜಯ್ ದತ್ ವಿರುದ್ಧ ಜಾಮೀನುರಹಿತ ವಾರಂಟ್

Sumana Upadhyaya
ಮುಂಬೈ: ಚಿತ್ರ ನಿರ್ಮಾಪಕ ಶಕೀಲ್ ನೂರಾನಿ ಅವರಿಗೆ ಬೆದರಿಕೆ ಹಾಕಿದ್ದಕ್ಕಾಗಿ ಮುಂಬೈಯ ಅಂಧೇರಿ ನ್ಯಾಯಾಲಯ ಬಾಲಿವುಡ್ ನಟ ಸಂಜಯ್ ದತ್ ವಿರುದ್ಧ ಜಾಮೀನುರಹಿತ ವಾರಂಟ್ ಹೊರಡಿಸಿದೆ.
ಇದು 2002ರಲ್ಲಿ ನಡೆದ ಘಟನೆಗೆ ಸಂಬಂಧಿಸಿದ ಕೇಸು ಆಗಿದೆ. ನಟ ಸಂಜಯ್ ದತ್ ನೂರಾನಿಯವರ ಚಿತ್ರ ಜಾನ್ ಕಿ ಬಾಜಿಯಲ್ಲಿ ಮುಖ್ಯ ಪಾತ್ರ ವಹಿಸಬೇಕಾಗಿತ್ತು. ಪಾತ್ರ ಮಾಡುವುದಾಗಿ ಹೇಳಿದ ಸಂಜಯ್ ದತ್ ನಂತರ ಶೂಟಿಂಗ್ ಗೆ ಹೋಗಲಿಲ್ಲ ಮತ್ತು ಚಿತ್ರಕ್ಕೆ ಸಂಭಾವನೆಯಾಗಿ ತೆಗೆದುಕೊಂಡಿದ್ದ 50 ಲಕ್ಷ ರೂಪಾಯಿಗಳನ್ನು ಕೂಡ ನೀಡಲಿಲ್ಲ.
ಸಮಸ್ಯೆ ಬಗೆಹರಿಯದಿದ್ದಾಗ ನೂರಾನಿ ನ್ಯಾಯಾಲಯದ ಮೊರೆ ಹೋದರು. ಮುಂಬೈ ಹೈಕೋರ್ಟ್ ದತ್ ಅವರ ಆಸ್ತಿಯನ್ನು ವಶಪಡಿಸಿಕೊಳ್ಳುವಂತೆ ಆದೇಶ ನೀಡಿತು.
ಆ ಸಂದರ್ಭದಲ್ಲಿ ತಮಗೆ ಭೂಗತಲೋಕದಿಂದ ಬೆದರಿಕೆ ಕರೆಗಳು ಬರುತ್ತಿವೆ ಎಂದು ನೂರಾನಿ ಅಂಧೇರಿ ನ್ಯಾಯಾಲಯದಲ್ಲಿ ಕೇಸು ದಾಖಲಿಸಿದ್ದರು.
2013ರಲ್ಲಿ ಸಂಜಯ್ ದತ್ ನ್ಯಾಯಾಲಯಕ್ಕೆ ಹಾಜರಾಗಲು ನಿರಾಕರಿಸಿದಾಗ ಜಾಮೀನುರಹಿತ ಬಂಧನದ ವಾರಂಟ್ ಹೊರಡಿಸಲಾಗಿತ್ತು. ಆದರೆ ನಂತರ ನ್ಯಾಯಾಲಯಕ್ಕೆ ದತ್ ಹಾಜರಾಗಿದ್ದರಿಂದ ವಾರಂಟ್ ನ್ನು ರದ್ದುಪಡಿಸಲಾಯಿತು. 
ನಂತರ ಸಂಜಯ್ ದತ್ 1993ರ ಮುಂಬೈ ಸರಣಿ ಸ್ಫೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದಕ್ಕಾಗಿ 5 ವರ್ಷ ಜೈಲು ಶಿಕ್ಷೆ ನೀಡಿ ಕೋರ್ಟ್ ತೀರ್ಪು ನೀಡಿತು.
ಸಂಜಯ್ ದತ್ ಜೈಲಿನಿಂದ ಹೊರಬಂದ ನಂತರ ನೂರಾನಿಯವರ ಪರ ವಕೀಲರು ಈ ವರ್ಷ ಫೆಬ್ರವರಿಯಲ್ಲಿ ನ್ಯಾಯಾಲಕ್ಕೆ ಹಾಜರಾಗುವಂತೆ ದತ್ ಅವರಿಗೆ ಆದೇಶ ನೀಡಲು ಮನವಿ ಸಲ್ಲಿಸಿದರು. ಸಂಜಯ್ ದತ್ ಅವರು ಜೈಲಿನಿಂದ ಹೊರಗಿರುವಾಗ, ಅವರು ನ್ಯಾಯಾಲಯಕ್ಕೆ ಹಾಜರಾಗಬೇಕು. ಆದರೆ ಅವರು ನ್ಯಾಯಾಲಯಕ್ಕೆ ಹಾಜರಾಗುತ್ತಿಲ್ಲ ಎಂದು ಚಿತ್ರ ನಿರ್ಮಾಪಕ ನೂರಾನಿಯವರ ಪರ ವಕೀಲ ಆರೋಪಿಸಿದ್ದಾರೆ.
ಈ ಹಿಂದಿನ ಚೆಕ್‌–ಬೌನ್ಸ್‌ ಪ್ರಕರಣದ ಸಂಬಂಧವೂ ಸಂಜಯ್‌ ದತ್‌ ಮುಂಬೈ ಕೋರ್ಟ್‌ನಲ್ಲಿ ವಿಚಾರಣೆಗೆ ಹಾಜರಾಗಿರಲಿಲ್ಲ. ನಿರ್ಮಾಪಕ ಶಕೀಲ್‌ ನೂರಾನಿ ಅವರ ಸಿನಿಮಾ ಪೂರೈಸದ ಕಾರಣ ಸಂಜಯ್‌ ದತ್‌ 1 ಕೋಟಿ ನೀಡಬೇಕಿದೆ.
SCROLL FOR NEXT