ದೇಶ

ಬಿಜೆಪಿಗೆ ಮತ ಹಾಕಿದರೆ, ನಿಮ್ಮ ಮಕ್ಕಳಿಗೆ ಡೆಂಘೀ ಬಂದರೆ ನೀವೇ ಹೊಣೆ: ಕೇಜ್ರಿವಾಲ್

Manjula VN
ನವದೆಹಲಿ: ದೆಹಲಿ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಿದರೆ, ಮಕ್ಕಳಿಗೆ ಡೆಂಘೀ ಮತ್ತು ಚಿಕೂನ್ ಗುನ್ಯಾದಂಥ ಕಾಯಿಲೆಗಳು ಬಂದರೆ ಮತದಾರರೇ ಜವಾಬ್ದಾರರಾಗಲಿದ್ದಾರೆಂದು ದೆಹಲಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅವರು ಹೇಳಿದ್ದಾರೆ. 
ಈ ಕುರಿತಂತೆ ಮಾತನಾಡಿರುವ ಅವರು, ದೆಹಲಿ ಪಾಲಿಕೆ ಚುನಾವಣೆ ಹತ್ತಿರ ಬರುತ್ತಿರುವ ಹಿನ್ನಲೆಯಲ್ಲಿ ರಾಜ್ಯದಲ್ಲಿ ವಿದ್ಯುತ್ ಪೂರೈಕೆಯಲ್ಲಿ ಸಮಸ್ಯೆಯುಂಟು ಮಾಡಲು ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರು ವಿದ್ಯುತ್ ಕಂಬಗಳಿಂದ ತೈಲಗಳನ್ನು ಕದಿಯುತ್ತಿದ್ದಾರೆ. ವಾಟರ್ ಟ್ಯಾಪ್ ಗಳನ್ನು ಕಳ್ಳತನ ಮಾಡುತ್ತಿದ್ದಾರೆ. ಒಳಚರಂಡಿ ಪೈಪ್ ಗಳ ಮೇಲೆ ಸಿಮೆಂಟ್ ಬ್ಲಾಕ್'ಗಳನ್ನು ಎಸೆಯುತ್ತಿದ್ದಾರೆ. ಈ ರೀತಿಯ ಸಮಸ್ಯೆಗಳನ್ನು ಭಾನುವಾರದವರೆಗೂ ಅವರು ಸೃಷ್ಟಿ ಮಾಡಬಹುದು. ಇಂತಹ ಕೀಳು ಮಟ್ಟ ರಾಜಕೀಯವನ್ನು ಮಾಡಬೇಡಿ ಎಂದು ಅಂತಹ ಜನರಿಗೆ ನನ್ನ ಎರಡು ಕೈಗಳನ್ನು ಜೋಡಿಸಿ ಮನವಿ ಮಾಡಿಕೊಳ್ಳುತ್ತಿದ್ದೇನೆಂದು ಹೇಳಿದ್ದಾರೆ. 
ಭಾನುವಾರದವರೆಗೂ ಜನರಿಗೆ ಇಂತಹ ಸಮಸ್ಯೆಗಳು ಎದುರಾದರೆ ಕಾಂಗ್ರೆಸ್ ಮತ್ತು ಬಿಜೆಪಿಯ ವಿರುದ್ಧ ವಾಗ್ದಾಳಿ ನಡೆಸಿ. ಬಿಜೆಪಿಗೆ ಮತ ಹಾಕಬೇಡಿ. ಕಳೆದ ಹತ್ತು ವರ್ಷಗಳಿಂದಲೂ ಈ ಪಕ್ಷ ದೆಹಲಿ ಮಹಾನಗರ ಪಾಲಿಕೆಯಲ್ಲಿ ಅಧಿಕಾರ ನಡೆಸುತ್ತಿದೆ. ಈ ಹತ್ತು ವರ್ಷದಲ್ಲಿ ನಗರವನ್ನೇ ಸ್ವಚ್ಛ ಮಾಡದ ಸರ್ಕಾರ ಮುಂಬರುವ ವರ್ಷಗಳಲ್ಲಿ ನಗರವನ್ನು ಹೇಗೆ ಸ್ವಚ್ಛಗೊಳಿಸುತ್ತದೆ ಎಂದು ಪ್ರಶ್ನಿಸಿದ್ದಾರೆ. 
ಒಂದು ವೇಳೆ ಬಿಜೆಪಿಗೆ ನೀವು ಮತ ಹಾಕಿದ್ದೇ ಆದರೆ, ನಿಮ್ಮ ಮಕ್ಕಳಿಗೆ ಡೆಂಘೀ ಮತ್ತು ಚಿಕೂನ್ ಗುನ್ಯಾದಂಥ ಕಾಯಿಲೆಗಳು ಬಂದರೆ ಅದಕ್ಕೆ ನೀವೇ ಹೊಣೆಗಾರರಾಗುತ್ತೀರಿ. ಏಕೆಂದರೆ, ಡೆಂಘೀಯಂತಹ ಪಕ್ಷ, ಚಿಕೂನ್ ಗುನ್ಯಾದಂಥಹ ಪಕ್ಷ, ಸೊಳ್ಳೆ ಕಚ್ಚುವ ಪಕ್ಷ ಬಿಜಿಪಿಗೆ ಮತ ಹಾಕಿದ್ದೀರಿ. ಹೀಗಾಗಿ ಮಕ್ಕಳಿಗೆ ಡೆಂಘೀ, ಚಿಕೂನ್ ಗೂನ್ಯಾ ಬಂದನೆ ನೀವೇ ಜವಾಬ್ದಾರರಾಗುತ್ತೀರಿ ಎಂದಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ವಿರುದ್ದವೂ ಕಿಡಿಕಾರಿರುವ ಅವರು, ಕಾಂಗ್ರೆಸ್ ಎಂದಿಗೂ ನಿಮ್ಮ ಮತವನ್ನು ಹಾಕಬೇಡಿ. ಕಾಂಗ್ರೆಸ್ ಗೆ ಮತ ಹಾಕಿ ನಿಮ್ಮ ಒಂದು ಅಮೂಲ್ಯವಾದ ಮತವನ್ನು ವ್ಯರ್ಥ ಮಾಡದಿರಿ. ಪ್ರಾಮಾಣಿಕ ಪಕ್ಷ (ಆಪ್)ಕ್ಕೆ ಮತ ಹಾಕಿ. ಇದರಿಂದ ಒಂದು ವರ್ಷ ದೆಹಲಿ ಹೊಳೆಯುತ್ತದೆ. 3 ವರ್ಷಗಳ ಡೆಂಘೀ ಪಿಡುಗಿಗೆ ಅಂತ್ಯ ಹಾಡಿ ಎಂದು ತಿಳಿಸಿದ್ದಾರೆ. 
SCROLL FOR NEXT