ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ
ನವದೆಹಲಿ: ಮುಸ್ಲಿಮರು ಬಿಜೆಪಿಗೆ ಮತ ಹಾಕದಿದ್ದರೂ ಕೇಂದ್ರ ಸರ್ಕಾರ ಅವರಿಗೆ 'ಸೂಕ್ತ ಪ್ರಾತಿನಿಧ್ಯ' ನೀಡಿದೆ ಎಂಬ ಹೇಳಿಕೆ ನೀಡಿ ವಿರೋಧ ಪಕ್ಷಗಳ ಟೀಕೆಗಳಿಗೆ ಗುರಿಯಾಗಿರುವ ಕೇಂದ್ರ ಸಚಿವ ರವಿ ಶಂಕರ್ ಪ್ರಸಾದ್ ಅವರ ಬೆನ್ನಿಗೆ ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು ನಿಂತಿದ್ದಾರೆ.
ರವಿ ಶಂಕರ್ ಪ್ರಸಾದ್ ಅವರ ಹೇಳಿಕೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ರವಿ ಶಂಕರ್ ಪ್ರಸಾದ್ ಅವರು ನೀಡಿರುವ ಹೇಳಿಕೆ ಸಾಂವಿಧಾನಿಕ ಪ್ರಕ್ರಿಯೆಯಂತೆ ಸರಿಯಾಗಿದೆ. ಒಮ್ಮೆ ಚುನಾವಣೆ ಮುಕ್ತಾಯಗೊಂಡ ಬಳಿಕ, ಜನಾದೇಶ ಸಿಗುತ್ತದೆ. ಮುಸ್ಲಿಮರಿಗೂ ಸೇರಿದಂತೆ ನಮ್ಮ ಸರ್ಕಾರ ಶೇ.100ರಷ್ಟು ಜನರಿಗಾಗಿ ಕೆಲಸ ಮಾಡುತ್ತದೆ. ಚುನಾವಣೆ ಬಳಿಕ ಯಾರು...ಯಾರಿಗೆ ಮತ ಹಾಕಿದರು...ಯಾರು ಮತ ಹಾಕಿಲ್ಲ ಎಂಬುದನ್ನು ನಾವು ನೋಡುವುದಿಲ್ಲ. ಹೀಗಾಗಿ ರವಿ ಶಂಕರ್ ಪ್ರಸಾದ್ ಅವರು ನೀಡಿರುವ ಹೇಳಿಕೆ ಸರಿಯಾಗಿದೆ ಎಂದು ಹೇಳಿದ್ದಾರೆ.
ಮೈಂಡ್ ಮೈನ್ ಶೃಂಗದಲ್ಲಿ ಮಾತನಾಡಿದ್ದ ರವಿ ಶಂಕರ್ ಪ್ರಸಾದ್ ಅವರು, ಮುಸ್ಲಿಂ ಸಮುದಾಯದವರು ನಮಗೆ ಮತ ಹಾಕುವುದಿಲ್ಲ. ಆದರೂ ನಾವು ಅವರಿಗೆ ಸರಿಯಾದ ಪ್ರಾತಿನಿಧ್ಯ ನೀಡಿದ್ದೇವೆಯೇ ಅಥವಾ ಇಲ್ಲವೇ? ರಾಷ್ಟ್ರದಲ್ಲಿ ನಮ್ಮ ಪಕ್ಷದ 13 ಮುಖ್ಯಮಂತ್ರಿಗಳಿದ್ದಾರೆ. ಕೈಗಾರಿಕೆ ಅಥವಾ ಸೇವಾ ವಲಯದಲ್ಲಿ ಕೆಲಸ ಮಾಡುತ್ತಿರುವ ಮುಸ್ಲಿಂ ಸಮುದಾಯದ ವ್ಯಕ್ತಿಗಳನ್ನು ನಾವು ಸಂತ್ರಸ್ತರನ್ನಾಗಿ ಮಾಡಿದ್ದೇವೆಯೇ? ನಾವು ಅವರನ್ನು ಅಮಾನತು ಮಾಡಿದ್ದೇವೆಯೇ? ಎಂದು ಪ್ರಶ್ನಿಸಿದ್ದರು. ಈ ಹೇಳಿಕೆಗೆ ವಿರೋಧ ಪಕ್ಷಗಳು ಸಾಕಷ್ಟು ಟೀಕೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ.