ಲಖನೌ: ವರದಕ್ಷಿಣೆಯಾಗಿ ಎಸ್ ಯುವಿ ಕಾರು ನೀಡಲಿಲ್ಲ ಎಂಬ ಕಾರಣಕ್ಕಾಗಿ ಉತ್ತರ ಪ್ರದೇಶದಲ್ಲಿ ಮಹಿಳೆಯನ್ನು ಸಜೀವವಾಗಿ ದಹಿಸಿರುವ ಘಟನೆ ಬೆಳಕಿಗೆ ಬಂದಿದೆ.
ಉತ್ತರ ಪ್ರದೇಶದ ಸೀತಾಪುರದ ಜಿಲ್ಲೆಯಲ್ಲಿ ಈ ಅಮಾನವೀಯ ಕೃತ್ಯ ಬೆಳಕಿಗೆ ಬಂದಿದ್ದು, ವರದಕ್ಷಿಣೆಯಾಗಿ ಎಸ್ ಯುವಿ ಕಾರು ತರಲಿಲ್ಲ ಎಂದು ಪತಿ ಸಹೋದರ ಸಂಬಂಧಿಗಳೇ ಮಹಿಳೆಯನ್ನು ಬೆಂಕಿ ಹಾಕಿ ಸಜೀವವಾಗಿ ಧಹಿಸಿದ್ದಾರೆ. ಈ ವಿಚಾರ ಬಹಿರಂಗವಾಗುತ್ತಿದ್ದಂತೆಯೇ ಎಲ್ಲರೂ ನಾಪತ್ತೆಯಾಗಿದ್ದು, ಪ್ರಸ್ತುತ ಪ್ರಕರಣ ದಾಖಲಿಸಿಕೊಂಡಿರುವ ಸೀತಾಪುರ ಪೊಲೀಸರು ಪತಿ ಹಾಗೂ ಆತನ ಸಹೋದರ ಸಂಬಂಧಿಗಳನ್ನು ಬಂಧಿಸಲು ಬಲೆ ಬೀಸಿದ್ದಾರೆ.
ಕೇಂದ್ರೀಯ ಅಪರಾಧ ದಾಖಲೆಗಳ ಸಂಸ್ಥೆ ನೀಡಿರುವ ಅಂಕಿ ಅಂಶಗಳ ಪ್ರಕಾರ 2015ರಲ್ಲಿ ದೇಶದಲ್ಲಿ ಬರೊಬ್ಬರಿ 7,634 ಮಹಿಳೆಯರು ವರದಕ್ಷಿಣೆ ಪ್ರಕರಣಗಳಲ್ಲಿ ಸಾವನ್ನಪ್ಪಿದ್ದಾರೆ. ಇದೇ ವಿಚಾರವಾಗಿ ಈ ಹಿಂದೆ ಲೋಕಸಭೆಗೆ ಲಿಖಿತ ಮಾಹಿತಿ ನೀಡಿದ್ದೇ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮನೇಕಾ ಗಾಂಧಿ ಅವರು, 2012, 2013 ಮತ್ತು 2014ನೇ ಸಾಲಿನಲ್ಲಿ ಕ್ರಮವಾಗಿ 8,233, 8,083, ಮತ್ತು 8,455 ಪ್ರಕರಣಗಳು ಐಪಿಸಿ ಸೆಕ್ಷನ್ 304 ಬಿ (ವರದಕ್ಷಿಣೆ)ದಾಖಲಾಗಿತ್ತು ಎಂದು ತಿಳಿಸಿದ್ದಾರೆ.
ಇನ್ನು ಇತ್ತೀಚೆಗಷ್ಟೇ ಸುಪ್ರೀಂ ಕೋರ್ಟ್ ಇದೇ ವಿಚಾರವಾಗಿ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ಮಹಿಳೆಯರು ಏಕೆ ಈ ದೇಶದಲ್ಲಿ ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತಿಲ್ಲ ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿತ್ತು.