ದೇಶ

'ಪಾಕಿಸ್ತಾನಕ್ಕೆ ಹೋಗು': ಸೀಟು ಕೇಳಿದ ಮುಸ್ಲಿಂ ವೃದ್ಧನ ಮೇಲೆ ಕೂಗಾಡಿದ ಯುವಕರು

Manjula VN
ನವದೆಹಲಿ: ಕುಳಿತುಕೊಳ್ಳಲು ಸೀಟು ಬಿಟ್ಟುಕೊಡುವಂತೆ ಮನವಿ ಮಾಡಿದ ಮುಸ್ಲಿಂ ವೃದ್ಧನ ಜೊತೆಗೆ ಯುವಕರು ಅಮಾನವೀಯವಾಗಿ  ನಡೆದುಕೊಂಡಿರುವ ಘಟನೆಯೊಂದು ದೆಹಲಿ ಮೆಟ್ರೋದಲ್ಲಿ ನಡೆದಿದೆ. 
ದೆಹಲಿ ಮೆಟ್ರೋದ ವೈಲೆಟ್ ಲೈನ್ ನಲ್ಲಿ ಘಟನೆ ನಡೆದಿದೆ. ಮೆಟ್ರೋ ರೈಲು ಹತ್ತಿದ್ದ ವೃದ್ಧರೊಬ್ಬರು ಯವಕರು ಕುಳಿತುಕೊಂಡಿದ್ದ ಸೀಟಿನ ಬಳಿ ಹೋಗಿದ್ದಾರೆ. ಈ ವೇಳೆ ಕುಳಿತುಕೊಳ್ಳಲು ಸೀಟು ಬಿಟ್ಟುಕೊಡುವಂತೆ ಮನವಿ ಮಾಡಿದ್ದಾರೆ. ಈ ವೇಳೆ ವೃದ್ಧನ ಮೇಲೆ ಕೂಗಾಡಿರುವ ಯುವಕರು, ಸೀಟು ಬೇಕಿದ್ದರೆ ಪಾಕಿಸ್ತಾನಕ್ಕೆ ಹೋಗು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. 
ಈ ಘಟನೆ ಕುರಿತಂತೆ ಮಹಿಳಾ ಕಾರ್ಯಕರ್ತೆ ಕವಿತಾ ಕೃಷ್ಣನ್ ಎಂಬುವವರು ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದರು. ಇದಾದ ಬಳಿಕ ಘಟನೆ ಬೆಳಕಿಗೆ ಬಂದಿದೆ. 
ಕವಿತಾ ಅವರ ಪೋಸ್ಟ್ ನಲ್ಲಿರುವ ಪ್ರಕಾರ, ರೈಲು ಹತ್ತಿದ್ದ ವೃದ್ಧರೊಬ್ಬರು ಯುವಕರ ಬಳಿ ಹೋಗಿ ಸೀಟು ಬಿಟ್ಟುಕೊಡುವಂತೆ ಮನವಿ ಮಾಡಿದ್ದರು. ಈ ವೇಳೆ ವೃದ್ಧನ ಮೇಲೆ ಯುವಕರು ಕೂಗಾಡಿದ್ದರು. ಅಲ್ಲದೆ, ಸೀಟು ಬೇಕು ಎಂದಾದರೆ ಪಾಕಿಸ್ತಾನಕ್ಕೆ ಹೋಗಿ ಎಂದು ಕೂಗಾಡಿದ್ದರು. ಈ ವೇಳೆ ಎಐಸಿಸಿಟಿಯು ರಾಷ್ಟ್ರೀಯ ಕಾರ್ಯದರ್ಶಿ ಸಂತೋಷ್ ರಾಯ್ ಅವರು ಮಧ್ಯೆ ಪ್ರವೇಶ ಮಾಡಿ ವೃದ್ಧನ ಬೆಂಬಲಕ್ಕೆ ನಿಂತು ಮಾತನಾಡಿದ್ದರು. 
ಅಲ್ಲದೆ, ವೃದ್ಧನಿಗೆ ಯುವಕರು ಕ್ಷಮೆಯಾಚಿಸುವಂತೆ ಕೇಳಿದರು. ಈ ವೇಳೆ ಯುವಕರು ರಾಯ್ ಅವರ ಕುತ್ತಿಗೆಪಟ್ಟಿ ಹಿಡಿದು ಕ್ಷಮೆಯಾಚಿಸುವುದಿಲ್ಲ. ಬೇಕಿದ್ದರೆ, ಆತ ಪಾಕಿಸ್ತಾನಕ್ಕೆ ಹೋಗಲಿ ಎಂದು ಹೇಳಿದರು ಎಂದು ಬರೆದುಕೊಂಡಿದ್ದಾರೆ. 
ರೈಲು ಖಾನ್ ಮಾರುಕಟ್ಟೆ ನಿಲ್ದಾಣಕ್ಕೆ ಬರುತ್ತಿದ್ದಂತೆಯೇ ಭದ್ರತಾ ಸಿಬ್ಬಂದಿಗಳು ಸ್ಥಳಕ್ಕೆ ಬಂದರು. ಪಂಡಾರಾ ರಸ್ತೆಯಲ್ಲಿರುವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 
ಇದಾದ ಕೆಲವೇ ದಿನಗಳಲ್ಲಿ ರಾಯ್ ಅವರು ಪೊಲೀಸ್ ಠಾಣೆಗೆ ಭೇಟಿ ನೀಡಿದ್ದರು. ಈ ವೇಳೆ ಯುವಕರಿಗೆ ಶಿಕ್ಷೆ ನೀಡದಂತೆ ಪೊಲೀಸರಿಗೆ ತಿಳಿಸಿದ್ದ ವೃದ್ಧ ದೂರನ್ನು ನೀಡಿರಲಿಲ್ಲ ಎಂಬ ವಿಚಾರ ತಿಳಿದಿದೆ. 
ಈ ಬಗ್ಗೆ ವೃದ್ಧ ಪೊಲೀಸರಿಗೆ ಪತ್ರವೊಂದನ್ನು ಬರೆದಿದ್ದು, ಹೇಳಿಕೆಯನ್ನು ನೀಡಿದ್ದಾರೆ. ಯುವಕರ ಕ್ಷಮಾಪಣೆಯನ್ನು ಸ್ವೀಕರಿಸಿದ್ದು, ಯುವಕರನ್ನು ಕ್ಷಮಿಸಿದ್ದೇನೆಂದು ಬರೆದುಕೊಟ್ಟಿದ್ದಾರೆಂದು ಕವಿತಾ ಅವರು ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ. 
SCROLL FOR NEXT