ದೇಶ

ಸ್ವಚ್ಛ ಭಾರತ ಅಭಿಯಾನ: ಪ್ರಧಾನಿ ಮೋದಿಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದ ಬಿಲ್ ಗೇಟ್ಸ್

Sumana Upadhyaya
ನವದೆಹಲಿ:  ಭಾರತ ಸರ್ಕಾರದ ಸ್ವಚ್ಛ ಭಾರತ ಅಭಿಯಾನವನ್ನು ಮೆಚ್ಚಿಕೊಂಡಿರುವುದಾಗಿ ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ, ವಿಶ್ವದ ಶ್ರೀಮಂತ ಲೋಕೋಪಕಾರಿ ಬಿಲ್ ಗೇಟ್ಸ್ ಹೇಳಿದ್ದಾರೆ.
ಅವರು ತಮ್ಮ ಗೇಟ್ಸ್ ನೋಟ್ಸ್.ಕಾಂ ಬ್ಲಾಗ್ ನಲ್ಲಿ ಮಾನವ ತ್ಯಾಜ್ಯ ವಿಷಯದಲ್ಲಿ ಭಾರತ ಗೆಲ್ಲುತ್ತಿದೆ. ಪ್ರಧಾನ ಮಂತ್ರಿಯವರು ಸ್ವಚ್ಛ ಭಾರತ ಅಭಿಯಾನದಲ್ಲಿ ಮುತುವರ್ಜಿ ತೆಗೆದುಕೊಳ್ಳುತ್ತಿದ್ದಾರೆ ಎಂದಿದ್ದಾರೆ. 
ಮೂರು ವರ್ಷಗಳ ಹಿಂದೆ ಸಾರ್ವಜನಿಕ ಆರೋಗ್ಯ ಕುರಿತು ಭಾರತದ ಪ್ರಧಾನಿ ಮೋದಿಯವರು ಧೈರ್ಯದ ಹೇಳಿಕೆಯನ್ನು ನೀಡಿದ್ದರು. ಅಲ್ಲಿಯವರೆಗೆ ನಾನು ಚುನಾಯಿತ ಪ್ರತಿನಿಧಿಯ ಅಂತಹ ಹೇಳಿಕೆ ಕೇಳಿರಲಿಲ್ಲ. ರಾಷ್ಟ್ರೀಯ ನಾಯಕರೊಬ್ಬರು ಇಂತಹ ಸೂಕ್ಷ್ಮ ವಿಷಯವನ್ನು ಪ್ರಾಮಾಣಿಕವಾಗಿ ಸಾರ್ವಜನಿಕವಾಗಿ ಹೇಳುವುದನ್ನು ಯೋಚಿಸಲೂ ಸಾಧ್ಯವಿಲ್ಲ ಎಂದು ಬಿಲ್ ಗೇಟ್ಸ್ ಪ್ರಧಾನಿ ಮೋದಿಯವರು 2014ರಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು ದೇಶದ ಜನತೆಯನ್ನುದ್ದೇಶಿಸಿ ಮಾಡಿದ ಭಾಷಣವನ್ನು ಪ್ರಸ್ತಾಪಿಸಿದ್ದಾರೆ.
ನಾವು 21ನೇ ಶತಮಾನದಲ್ಲಿ ಜೀವಿಸುತ್ತಿದ್ದೇವೆ.ನಮ್ಮ ತಾಯಂದಿರು ಮತ್ತು ಸಹೋದರಿಯರು ಬಯಲಿನಲ್ಲಿ ಶೌಚ ಮಾಡುವುದನ್ನು ನೋಡಿ ನಮಗೆ ಬೇಸರವಾಗಿದೆಯೇ?  ಇಂದಿಗೂ ಹಲವು ಗ್ರಾಮೀಣ ಭಾಗಗಳಲ್ಲಿ ಮಹಿಳೆಯರು ಬಹಿರ್ದೆಸೆಗೆ ಹೋಗಲು ರಾತ್ರಿ ಹೊತ್ತಿಗಾಗಿ ಕಾಯುತ್ತಿದ್ದಾರೆ.  ರಾತ್ರಿ ವೇಳೆ ಬಹಿರ್ದೆಸೆಗೆ ಹೋದರೆ ಎಷ್ಟು ಕ್ರಿಮಿ ಕೀಟಗಳು ದೇಹಕ್ಕೆ ಹೊಕ್ಕು ಕಾಯಿಲೆ ಬರಬಹುದು, ಮಹಿಳೆಯರು ಎಷ್ಟು ಅಸುರಕ್ಷಿತರು ಎಂದು ಮೋದಿ 3 ವರ್ಷಗಳ ಹಿಂದೆ ಭಾಷಣದಲ್ಲಿ ಹೇಳಿದ್ದರು.
ಶುಚಿತ್ವದ ಕೊರತೆಯಿಂದಾಗಿ ಭಾರತಕ್ಕೆ ವರ್ಷಕ್ಕೆ 106 ಡಾಲರ್ ನಷ್ಟವಾಗುತ್ತದೆ. ಸಾವು, ಆರೋಗ್ಯ ಕೆಡುವುದು ಮತ್ತು ಅವಕಾಶಗಳ ಕೊರತೆಯಿಂದಾಗಿ ಇಷ್ಟು ಹಣ ಖರ್ಚಾಗುತ್ತದೆ. 
ಪ್ರಧಾನಿ ಮೋದಿಯವರು ಆರಂಭಿಸಿದ ಸ್ವಚ್ಛ ಭಾರತ ಅಭಿಯಾನ ಗುರಿ ತಲುಪುವುದರ ಮೊದಲ ಹೆಜ್ಜೆ. ಸ್ವಚ್ಛತೆಯ ಕೊರತೆಯಿಂದ ಭಾರತದಲ್ಲಿ ಪ್ರತಿವರ್ಷ  5 ಲಕ್ಷಕ್ಕೂ ಹೆಚ್ಚು ಜನರು ಸಾಯುತ್ತಾರೆ ಎನ್ನುತ್ತಾರೆ ಬಿಲ್ ಗೇಟ್ಸ್. ಪ್ರತಿ ಮನೆಯಲ್ಲಿಯೂ ಶೌಚಾಲಯವಿರಬೇಕೆಂಬ ಮೋದಿಯವರ ಆಸೆ ಖಂಡಿತಾ ಅಗತ್ಯ ಎಂದು ಪ್ರಧಾನಿಯನ್ನು ಬಿಲ್ ಗೇಟ್ಸ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
SCROLL FOR NEXT