ಜೈಪುರ: ಮದುವೆ ನಡೆಯುತ್ತಿದ್ದ ವೇಳೆ ಮದುವೆಗೆ ಸಿದ್ಧಪಡಿಸಿದ್ದ ಮಂಟಪದ ಗೋಪುರ ಕುಸಿದು ಬಿದ್ದ ಪರಿಣಾಮ 9 ಮಂದಿ ಸಾವನ್ನಪ್ಪಿರುವ ಘಟನೆ ರಾಜಸ್ತಾನದ ಭರತ್ ಪುರ ಜಿಲ್ಲೆಯಲ್ಲಿ ನಡೆದಿದೆ.
ನಿನ್ನೆ ತಡರಾತ್ರಿ ಭರತ್ ಪುರ ಜಿಲ್ಲೆಯ ಪಿಢಿ ಗ್ರಾಮದಲ್ಲಿ ಮದುವೆ ಕಾರ್ಯಕ್ರಮವೊಂದು ನಡೆಯುತ್ತಿತ್ತು. ಮಂಟಪದಲ್ಲಿ ಭಾತ್ ವಿದ್ಯುಕ್ತ ಕಾರ್ಯಕ್ರಮ ನಡೆಯುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಇದರಲ್ಲಿ 9 ಮಂದಿ ಸಾವನ್ನಪ್ಪಿದ್ದು 15 ಮಂದಿ ಗಾಯಗೊಂಡಿದ್ದಾರೆ.
ಹಲವರು ಮದುವೆ ಮಂಟಪದ ಕಳಗೆ ಕುಳಿತಿದ್ದರು. ಈ ವೇಳೆ ಗೋಪುರ ಕುಸಿದು ಬಿದ್ದಿದ್ದರಿಂದ ಅದರಡಿ ಸಿಲುಕಿ 9 ಮಂದಿ ಸಾವನ್ನಪ್ಪಿದ್ದಾರೆ ಎಂದು ಭರತ್ ಪುರ ಗ್ರಾಮಾಂತರ ಸಹಾಯಕ ಎಸ್ ಪಿ ಧರ್ಮೇಂದ್ರ ಸಿಂಗ್ ತಿಳಿಸಿದ್ದಾರೆ.
ಮೃತರ ಪೈಕಿ ಮಹಿಳೆಯರೇ ಹೆಚ್ಚಾಗಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಗಾಯಗೊಂಡಿರುವ 15 ಮಂದಿಯನ್ನು ಜೈಪುರದ ಎಸ್ಎಂಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.