ಮುಂಬೈ: ವಿಚಾರವಾದಿ ಗೋವಿಂದ್ ಪನ್ಸಾರೆ ಹತ್ಯೆ ಪ್ರಕರಣದ ಇಬ್ಬರು ಪ್ರಮುಖ ಆರೋಪಿಗಳ ಬಗ್ಗೆ ಮಾಹಿತಿ ನೀಡಿದರೆ 10 ಲಕ್ಷ ರುಪಾಯಿ ಬಹುಮಾನ ನೀಡುವುದಾಗಿ ಮಹಾರಾಷ್ಟ್ರ ಸರ್ಕಾರ ಘೋಷಿಸಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.
2015, ಫೆಬ್ರವರಿ 16ರಂದು ಬೆಳಗ್ಗೆ ವಾಕಿಂಗ್ ಮಾಡುತ್ತಿದ್ದ ಗೋವಿಂದ್ ಪನ್ಸಾರೆ ಹಾಗೂ ಅವರ ಪತ್ನಿ ಮೇಲೆ ದುಷ್ಕರ್ಮಿಗಳು ಗುಂಡು ಹಾರಿಸಿದ್ದರು. ಅದೃಷ್ಟ ವಶಾತ್ ಅವರ ಪತ್ನಿ ಬದುಕುಳಿದಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ಸಿಪಿಐ ಹಿರಿಯ ನಾಯಕ ಮುಂಬೈನ ಆಸ್ಪತ್ರೆಯಲ್ಲಿ ನಿಧನರಾಗಿದ್ದರು.
ಪನ್ಸಾರೆ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಾದ ಸನಾತನ ಸಂಸ್ಥೆಯ ಕಾರ್ಯಕರ್ತರಾದ ವಿನಯ್ ಪವಾರ್ ಮತ್ತು ಸರಂಗ್ ಅಕೊಲ್ಕರ್ ಅವರು ತಪ್ಪಿಸಿಕೊಂಡಿದ್ದು, ಅವರ ಬಗ್ಗೆ ಖಚಿತ ಮಾಹಿತಿ ನೀಡಿದವರಿಗೆ 10 ಲಕ್ಷ ರುಪಾಯಿ ಬಹುಮಾನ ನೀಡುವುದಾಗಿ ರಾಜ್ಯ ಸರ್ಕಾರ ಘೋಷಿಸಿದೆ ಎಂದು ಕೊಲ್ಲಾಪುರ ವಲಯ ಪೊಲೀಸ್ ಮಹಾ ನಿರ್ದೇಶಕ ವಿಶ್ವಾಸ್ ನಂಗ್ರೆ ಪಾಟೀಲ್ ಅವರು ಪಿಟಿಐಗೆ ತಿಳಿಸಿದ್ದಾರೆ.
ಪನ್ಸಾರ್ ಕೊಲೆ ಪ್ರಕರಣ ಸಂಬಂಧ ಸೆಪ್ಟೆಂಬರ್, 2015ರಲ್ಲಿ ಪೊಲೀಸರು ಸನಾತನ ಸಂಸ್ಥೆಯ ಸದಸ್ಯ ಸಮೀರ್ ಗಾಯಕ್ವಾಡ್ ಅವರನ್ನು ಬಂಧಿಸಿದೆ.