ಹೈದರಾಬಾದ್: ಕಾಂಗ್ರೆಸ್ ಮುಖಂಡ ಮುಕೇಶ್ ಗೌಡ್ ಪುತ್ರ ವಿಕ್ರಮ್ ಗೌಡ್ ಅವರ ಮೇಲೆ ಬಂಜಾರಾ ಹಿಲ್ಸ್‌ನಲ್ಲಿರುವ ಅವರ ಮನೆಯಲ್ಲಿ ಇತ್ತೀಚೆಗೆ ನಡೆದಿದ್ದ ಗುಂಡಿನ ದಾಳಿಗೆ ಹೊಸ ಟ್ವಿಸ್ಟ್ ಸಿಕ್ಕಿದೆ. ಜನರ ಸಹಾನುಭೂತಿ ಗಿಟ್ಟಿಸಲು ವಿಕ್ರಮ್ ಅವರೇ ಸುಪಾರಿ ಕೊಟ್ಟು ರೂಪಿಸಿದ್ದ ಯೋಜನೆ ಎನ್ನಲಾಗಿದೆ
ವಿಕ್ರಮ್ ಗೌಡ ಪ್ರಬಲವಾಗಿ ಜ್ಯೋತಿಷ್ಯವನ್ನು ನಂಬುತ್ತಿದ್ದರು. 3 ಆತನ ಲಕ್ಕಿ ನಂಬರ್ ಆಗಿದ್ದು, ಮೂರು ಬಾರಿ ಆತನ ಮೇಲೆ ಪೈರಿಂಗ್ ಮಾಡುವಂತೆ ಸೂಚಿಸಿದ್ದ. ಆದರೆ ಮೂರನೇ ಗುಂಡು ಹೊಕ್ಕಿದ್ದರೇ ಆತನ ಪ್ರಾಣಕ್ಕೆ ಸಂಚಕಾರ ತರುತ್ತಿತ್ತು.
ಮೊದಲನೇ ಗುಂಡು ಭುಜಕ್ಕೆ ಹೊಕ್ಕಿತ್ತು, ಎರಡನೇ ಬುಲೆಟ್ ಆತನ ಹೊಟ್ಟೆಯ ಮೂಲಕ ಸ್ಪೈನಲ್ ಕಾರ್ಡ್ ಹೊಕ್ಕಿತ್ತು. ಮೂರನೇ ಬುಲೆಟ್ ಹಾರಿಸುವಷ್ಟರಲ್ಲಿ ಗನ್ ಜಾಮ್ ಆಗಿದೆ, ಹೀಗಾಗಿ ಮೂರನೇ ಬಾರಿಗೆ ಫೈರಿಂಗ್ ನಡೆಸಲು ಸಾಧ್ಯವಾಗಿಲ್ಲ, ಫೈರಿಂಗ್ ನಡೆಸಿದವರು ಅನನುಭವಿಗಳು ಎಂದು ಪೊಲೀಸರು ಹೇಳಿದ್ದಾರೆ.
ಸ್ಪೈನಲ್ ಕಾರ್ಡ್ ಗೆ ಹೊಕ್ಕಿರುವ ಗುಂಡನ್ನು ಸರ್ಜರಿ ಮೂಲಕ ತೆಗೆಯವುದು ಕಷ್ಟವಾಗುತ್ತಿದೆ ಎಂದು ವೈದ್ಯರು ಹೇಳಿದ್ದಾರೆ.
2019ರ ವಿಧಾನ ಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ವಿಕ್ರಮ್ ಗೌಡ ಉತ್ಸುಕರಾಗಿದ್ದರು. ಹೀಗಾಗಿ ಜನರ ಕರುಣೆ ಗಿಟ್ಟಿಸಲು ಈ ಫೇಕ್ ಶೂಟೌಟ್ ನಾಟಕ ನಡೆದಿದೆ.
ದಾಳಿಯ ಹಿಂದಿನ ರಾತ್ರಿ ವಿಕ್ರಮ್ ಬಹಳಷ್ಟು ಹೊತ್ತು, ಜ್ಯುಬಿಲಿ ಹಿಲ್‌ನಲ್ಲಿದ್ದ ಅತಿಥಿ ಗೃಹದಲ್ಲಿ ಸುಪಾರಿ ಗುಂಪಿನ ಜೊತೆ ಯೋಜನೆಗೆ ಅಂತಿಮ ಸ್ಪರ್ಶ ನೀಡುವಲ್ಲಿ ನಿರತರಾಗಿದ್ದರು. ತಮಗೆ ಗುಂಡು ಹಾರಿಸಿದ ಸದ್ದು ಕೇಳಿ ಹೆಂಡತಿ ಅಥವಾ ಕಾವಲುಗಾರ ಸ್ಥಳಕ್ಕೆ ಓಡಿ ಬಂದರೆ, ಉಳಿದ ಗುಂಡುಗಳನ್ನು ಗಾಳಿಯಲ್ಲಿ ಹಾರಿಸಿ ಅವರನ್ನು ಹೆದರಿಸಬೇಕು ಎಂಬುದೂ ಅವರ ಯೋಜನೆಯಲ್ಲಿ ಒಳಗೊಂಡಿತ್ತು.
ಮನೆಯ ಮುಖ್ಯದ್ವಾರಕ್ಕೆ ರಾತ್ರಿ ಬೀಗ ಹಾಕದಿರಲು ವಿಕ್ರಮ್ ಸೆಕ್ಯೂರಿಟಿಗೆ ತಿಳಿಸಿದ್ದರು. ಅವರ ಕಾವಲುಗಾರ ಹೇಳಿಕೆ ನೀಡಿದ್ದ ಮೇಲೆ ಅನುಮಾನಗೊಂಡ ಪೊಲೀಸರು ಹೆಚ್ಚಿನ ತನಿಖೆ ನಡೆಸಿದಾಗ ವಿಷಯ ಬೆಳಕಿಗೆ ಬಂದಿದೆ.
ದಾಳಿ ಮಾಡಿದ ಆರೋಪಿಗಳಿಗೆ ರು.50 ಲಕ್ಷ ನೀಡುವುದಾಗಿ ವಿಕ್ರಮ್ ಹೇಳಿದ್ದರು ಎಂದು ಹೈದರಾಬಾದ್ ಪೊಲೀಸ್ ಕಮಿಷನರ್ ಮಹೇಂದರ್ ರೆಡ್ಡಿ ಬುಧವಾರ ತಿಳಿಸಿದ್ದಾರೆ.
ದಾಳಿಗೆ ಬಳಸಲಾದ ಪಿಸ್ತೂಲನ್ನು ಇಂದೋರ್‌ನಲ್ಲಿ ಪಡೆಯಲಾಗಿತ್ತು. ಘಟನೆ ನಡೆದ ದಿನದವರೆಗೂ ತಮ್ಮ ಮನೆಯಲ್ಲೇ ಇಟ್ಟುಕೊಂಡಿದ್ದ ಈ ಪಿಸ್ತೂಲಿಗೆ ವಿಕ್ರಮ್ ಗುಂಡುಗಳನ್ನು ತುಂಬಿಸಿ ಇಟ್ಟಿದ್ದರು. ಪಿಸ್ತೂಲ್ ಬಳಸಿದ ಆರೋಪಿಗಳು ನಂತರ ಹಕೀಮ್‌ಪೇಟ್ ಕೆರೆಯಲ್ಲಿ ಅದನ್ನು ಎಸೆದಿದ್ದರು. ಪಿಸ್ತೂಲ್ ವಶಪಡಿಸಿಕೊಂಡಿರುವುದಾಗಿ ಪೋಲೀಸರು ತಿಳಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos