ಶ್ರೀನಗರ: ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಭಾರತೀಯ ಸೇನಾಪಡೆ ಎನ್ ಕೌಂಟರ್ ನಡೆಸಿದ್ದು, ಇಬ್ಬರು ಉಗ್ರರನ್ನು ಸದೆಬಡಿದಿದೆ ಎಂದು ಗುರುವಾರ ತಿಳಿದುಬಂದಿದೆ.
ಕುಲ್ಗಾಮ್ ಜಿಲ್ಲೆಯ ಗೋಪಾಲ್ಪೊರಾ ಪ್ರದೇಶದಲ್ಲಿ ಉಗ್ರರು ಅಡಗಿ ಕುಳಿತಿರುವ ಖಚಿತ ಮಾಹಿತಿ ತಿಳಿದುಬಂದ ಹಿನ್ನಲೆಯಲ್ಲಿ ಸೇನಾ ಪಡೆ ಕಾರ್ಯಾಚರಣೆ ನಡೆಸಲು ಆರಂಭಿಸಿತ್ತು. ಈ ವೇಳೆ ಉಗ್ರರು ಯೋಧರ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಉಗ್ರರ ದಾಳಿಗೆ ಸೇನಾ ಪಡೆ ದಿಟ್ಟ ಉತ್ತರ ನೀಡುವ ಮೂಲಕ ಇಬ್ಬರು ಉಗ್ರರನ್ನು ಹತ್ಯೆ ಮಾಡಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಹತ್ಯೆಯಾದ ಇಬ್ಬರು ಉಗ್ರರ ಪೈಕಿ ಓರ್ವ ಉಗ್ರ, ಮೇ.1 ರಂದು ಜಮ್ಮು ಮತ್ತು ಕಾಶ್ಮೀರದ ಬ್ಯಾಂಕ್ ವಾಹನದ ಮೇಲೆ ನಡೆದಿದ್ದ ದಾಳಿ ಪ್ರಕರಣದಲ್ಲಿ ಭಾಗಿಯಾಗಿದ್ದ. ಅಂದು ನಡೆದಿದ್ದ ದಾಳಿಯಲ್ಲಿ ಐವರು ಪೊಲೀಸ್ ಸಿಬ್ಬಂದಿಗಳು ಹಾಗೂ ಇಬ್ಬರು ಬ್ಯಾಂಕ್ ಸಿಬ್ಬಂದಿಗಳು ಮೃತಪಟ್ಟಿದ್ದರು ಎಂದು ತಿಳಿಸಿದ್ದಾರೆ.
ಎನ್ ಕೌಂಟರ್ ನಡೆದ ಸ್ಥಳದಲ್ಲಿ ಉಗ್ರರು ಬಳಸಿದ್ದ ಶಸ್ತ್ರಾಸ್ತ್ರಗಳು, ಸ್ಫೋಟಕ ವಸ್ತುಗಳನ್ನು ಸೇನಾಪಡೆ ವಶಕ್ಕೆ ಪಡೆದುಕೊಂಡಿದ್ದಾರೆಂದು ತಿಳಿದುಬಂದಿದೆ. ಸ್ಥಳದಲ್ಲಿ ಇನ್ನೂ 2-3 ಉಗ್ರರು ಅಡಗಿ ಕುಳಿತಿರುವ ಶಂಕೆಗಳು ವ್ಯಕ್ತವಾಗಿರುವ ಹಿನ್ನಲೆಯಲ್ಲಿ ಸೇನಾಪಡೆ ಕಾರ್ಯಾಚರಣೆ ಮುಂದುವರೆಸುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics