ನವದೆಹಲಿ: ಬಂಡವಾಳಶಾಹಿ ಹಿಡಿತದಿಂದ ವಿಶ್ವವನ್ನು ಉಳಿಸಲು ಭಾರತಕ್ಕೆ ಮಾತ್ರ ಸಾಧ್ಯ ಎಂದು ರಾಷ್ಟ್ರೀಯ ಸ್ವಯಂಸೇವಾ ಸಂಘ(ಆರ್ಎಸ್ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಇಡೀ ಪ್ರಪಂಚವು ಬಂಡವಾಳಶಾಹಿಯ ಹಿಡಿತದಲ್ಲಿದ್ದು ಇಂತಹ ವಿಪತ್ತಿನಿಂದ ವಿಶ್ವವನ್ನು ರಕ್ಷಿಸಲು ಭಾರತಕ್ಕೆ ಮಾತ್ರ ಸಾಧ್ಯವಾಗುತ್ತದೆ. ಭಾರತದಲ್ಲಿ ಪುರಾತನ ಧರ್ಮ ಅಣು ಮಾತ್ರದಲ್ಲಿ ಉಳಿದಿದ್ದು, ಭೂಮಿಯ ಮೇಲಿನ ಯಾವುದೇ ಶಕ್ತಿಯಿಂದ ಭಾರತಕ್ಕೆ ಹಾನಿಯಾಗುವುದಿಲ್ಲ. ಆದರೆ ದುರದೃಷ್ಟವಶಾತ್, ಪುರಾತನ ಧರ್ಮವು ಸಂಪೂರ್ಣವಾಗಿ ಭಾರತದಿಂದ ಕಣ್ಮರೆಯಾದರೆ, ಆಗ ಯಾವುದೇ ಶಕ್ತಿಯಿಂದ ಭಾರತವನ್ನು ಉಳಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು.
ಹಿಂದೂ ಸ್ವಯಂಸೇವಾ ಸಂಘ(ಎಚ್ಎಸ್ಎಸ್) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಮೋಹನ್ ಭಾಗವತ್, ಆರ್ಎಸ್ಎಸ್ ಸಂಸ್ಥಾಪಕ ಡಾ. ಕೇಶವ ಬಲಿರಾಮ್ ಹೆಡ್ಗೇವರ್ ಅವರು ದೇಶದ ಸದ್ಯದ ದುರದೃಷ್ಟಕರ ಪರಿಸ್ಥಿತಿಗೆ ಬ್ರಿಟಿಷ್ ಅಥವಾ ಮೊಘಲರನ್ನು ದೂಷಿಸಿರಲಿಲ್ಲ. ಸದ್ಯದ ದುರದೃಷ್ಟಕರ ಪರಿಸ್ಥಿತಿಗೆ ಹಿಂದೂಗಳೇ ಕಾರಣ. ನಾವು ಇಂತಹ ದುರದೃಷ್ಟಕರ ಪರಿಸ್ಥಿತಿಯಲ್ಲಿ ಹಿಂದೂಗಳನ್ನು ಬದುಕಲು ಬಿಡುವುದಿಲ್ಲ ಎಂದು ಹೇಳಿದ್ದಾರೆ.
ಹಿಂದೂ ಸಮುದಾಯ ಸಮಸ್ಯೆಯಲ್ಲಿದೆ ಎಂದು ನಾವು ಹಿಂದೂ ಸಮುದಾಯವನ್ನು ನಿರ್ಮಾಣ ಮಾಡಬೇಕಿಲ್ಲ. ಆದರೆ ಇದು ನಮ್ಮದೇ ಪವಿತ್ರ ಹಿಂದೂ ಧರ್ಮ. ಹೀಗಾಗಿ ನಾವು ನಮ್ಮ ಸಂಸ್ಕೃತಿ ಮತ್ತು ಹಿಂದೂ ರಾಷ್ಟ್ರವನ್ನು ಸಂರಕ್ಷಣೆ ಮಾಡಬೇಕಿದೆ ಎಂದರು.