ದೇಶ

ಉಗ್ರರಿಗೆ ನೆರವು ಪ್ರಕರಣ: ಕಾಶ್ಮೀರ ಪ್ರತ್ಯೇಕತಾವಾದಿ ನಾಯಕ ಶಬೀರ್‌ ಶಾ ಆಪ್ತ ಅಸ್ಲಾಂ ವನಿ ಬಂಧನ

Srinivasamurthy VN

ಶ್ರೀನಗರ: ಪಾಕಿಸ್ತಾನ ಮೂಲದ ಭಯೋತ್ಪಾದಕರಿಗೆ ಹಣಕಾಸು ನೆರವು ನೀಡುವ ಜಾಲದ ಬಗ್ಗೆ  ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಭಾನುವಾರ ಕಾಶ್ಮೀರ ಪ್ರತ್ಯೇಕತಾವಾದಿ ನಾಯಕ ಶಬೀರ್‌ ಶಾ  ಆಪ್ತ ಅಸ್ಲಾಂ ವನಿಯನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಉಗ್ರರಿಗೆ ಆರ್ಥಿಕ ನೆರವು ನೀಡಿದ ಆರೋಪ ಮತ್ತು ದಶಕಗಳ ಹಿಂದಿನ ಹವಾಲಾ ಹಣ ಪ್ರಕರಣಕ್ಕೆ ಸಂಬಂಧಿಸಿದಂತೆ ಖಚಿತ ಸಾಕ್ಷ್ಯಾಧಾರಗಳು ದೊರೆತ ಹಿನ್ನಲೆಯಲ್ಲಿ ವನಿಯನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.  ಭಯೋತ್ಪಾದಕರಿಗೆ ಹಣಕಾಸು ನೆರವು ನೀಡುವ ಜಾಲದ ಬಗ್ಗೆ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ. ಈ ಜಾಲದಲ್ಲಿ ವನಿ ಪಾತ್ರವಿರುವ ಆರೋಪದ ಮೇಲೆ ಆತನನ್ನು ಬಂಧಿಸಲಾಗಿದೆ. ಭಯೋತ್ಪಾದಕರಿಗೆ ಹಣಕಾಸು  ನೆರವು ನೀಡುವ ಜಾಲದಲ್ಲಿ ಸಕ್ರಿಯವಾಗಿರುವ ಆರೋಪದ ಮೇಲೆ ಜುಲೈ 25ರಂದು ಶಬೀರ್ ಶಾ ಅವರನ್ನು ಬಂಧಿಸಲಾಗಿತ್ತು. ಶಬೀರ್‌ ಅವರಿಗೆ ರು. 2.25 ಕೋಟಿ ಹಣ ನೀಡಿದ್ದಾಗಿ ವನಿ ಈ ಹಿಂದೆ ಬಂಧನಕ್ಕೊಳಗಾಗಿದ್ದ ವೇಳೆ  ತಪ್ಪೊಪ್ಪಿಕೊಂಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶ್ರೀನಗರದಲ್ಲಿ ವನಿಯನ್ನು ಬಂಧಿಸಲಾಗಿದ್ದು, ಇಂದು ಸಂಜೆ ದೆಹಲಿಗೆ ಕರೆತಂದು ಅಲ್ಲಿ ನ್ಯಾಯಾಧೀಶರ ಮುಂದೆ ಅಧಿಕಾರಿಗಳು ಹಾಜರುಪಡಿಸಲಿದ್ದಾರೆ.

SCROLL FOR NEXT