ತಮಿಳುನಾಡು ರಾಜಕೀಯದಲ್ಲಿ ಸಂಚಲನ: ರಜನಿಕಾಂತ್'ರನ್ನು ಭೇಟಿಯಾದ ಬಿಜೆಪಿ ಮುಖಂಡರು
ನವದೆಹಲಿ: ರಾಜಕೀಯಕ್ಕೆ ಪಾದಾರ್ಪಣೆ ಮಾಡುವುದಾಗಿ ಕೆಲ ದಿನಗಳ ಹಿಂದಷ್ಟೇ ಪ್ರಕಟಿಸಿ ತಮಿಳುನಾಡು ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಸೂಪರ್ ಸ್ಟಾರ್ ನಟ ರಜನಿಕಾಂತ್ ಅವರನ್ನು ಭಾನುವಾರ ಬಿಜೆಪಿ ಮುಖಂಡರು ಭೇಟಿ ಮಾಡಿದ್ದು, ಭಾರೀ ಕುತೂಹಲಕ್ಕೆ ಕಾರಣವಾಗಿದೆ.
ಚೆನ್ನೈನಲ್ಲಿರುವ ರಜನಿಕಾಂತ್ ಅವರ ನಿವಾಸಕ್ಕೆ ಬಿಜೆಪಿ ಸಂಸದೆ ಪೂನಮ್ ಮಹಾಜನ್ ಮತ್ತು ಇತರ ನಾಯಕರು ಭೇಟಿ ನೀಡಿದ್ದು, ರಜನಿಕಾಂತ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆಂದು ಹೇಳಲಾಗುತ್ತಿದೆ. ಬಿಜೆಪಿ ಮುಖಂಡರು ರಜನಿಯವರನ್ನು ಭೇಟಿ ಮಾಡಿರುವುದರಿಂದ ಬಿಜೆಪಿ ಪಕ್ಷಕ್ಕೆ ರಜನಿ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿಗೆ ಮತ್ತಷ್ಟು ಇಂಬು ನೀಡಿದಂತಾಗಿದೆ.
ಇನ್ನು ರಜನಿಕಾಂತ್ ಭೇಟಿ ಕುರಿತಂತೆ ಮೂಡಿರುವ ಊಹಾಪೋಹಗಳಿಗೆ ಬಿಜೆಪಿ ಯುವಮೋರ್ಚಾ ಸಂಘಟನೆ ಸ್ಪಷ್ಟನೆ ನೀಡಿದ್ದು, ತಲೈವಾ ಭೇಟಿ ಹಿಂದೆ ಯಾವುದೇ ರಾಜಕೀಯವಿಲ್ಲ ಎಂದು ಹೇಳಿಕೊಂಡಿದೆ.
ಇನ್ನು ರಜನಿಕಾಂತ್ ಅವರನ್ನು ಭೇಟಿ ಮಾಡಿದ ಫೋಟೋವನ್ನು ಬಿಜೆಪಿ ಸಂಸದೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಹಾಕಿದ್ದು, 'ಲತಾ ಜಿ ಮತ್ತು ತಲೈವಾ (ರಜನಿಕಾಂತ್)' ಭೇಟಿಯಾದ ಅತ್ಯಂತ ವಿನಮ್ರ ದಂಪತಿಗಳಲ್ಲಿ ಒಬ್ಬರು ಎಂದು ಹೇಳಿದ್ದಾರೆ.