ರಾಜೀವ್ ಗಾಂಧಿ ರಾಜಕೀಯವಾಗಿ ಅಪ್ರಬುದ್ಧ; ಇಂದಿರಾ ಉತ್ತರಾಧಿಕಾರಿಯಾಗಲು ಅಯೋಗ್ಯ: ಸಿಐಎ
ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿಯವರ ಹತ್ಯೆಗಿಂತ ಎರಡು ವರ್ಷ ಮೊದಲು ಕೇಂದ್ರೀಯ ಗುಪ್ತಚರ ಸಂಸ್ಥೆ...
ನವದೆಹಲಿ: ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿಯವರ ಹತ್ಯೆಗಿಂತ ಎರಡು ವರ್ಷ ಮೊದಲು ಕೇಂದ್ರೀಯ ಗುಪ್ತಚರ ಸಂಸ್ಥೆ (ಸಿಐಎ) ಅವರ ಪುತ್ರ ರಾಜೀವ್ ಗಾಂಧಿಯನ್ನು ರಾಜಕೀಯವಾಗಿ ಅಪ್ರಬುದ್ಧ ಎಂದು ಕರೆದಿತ್ತು.ಅಲ್ಲದೆ ಒಂದು ವೇಳೆ ಇಂದಿರಾಗಾಂಧಿಯವರು ಹಠಾತ್ತಾಗಿ ಸಾವಿಗೀಡಾದರೆ ರಾಜೀವ್ ಗಾಂಧಿ ಪ್ರಧಾನಿಯಾಗುವಲ್ಲಿ ಸಫಲವಾಗುವುದಿಲ್ಲ ಎಂದು ಕೂಡ ಹೇಳಿತ್ತು.
ರಾಜೀವ್ ಗಾಂಧಿ ಪಕ್ಷವನ್ನು ಮತ್ತು ಸಾರ್ವಜನಿಕ ಜನತೆಯನ್ನು ಪ್ರಚೋದಿಸುವಲ್ಲಿ ವಿಫಲರಾಗಿದ್ದಾರೆ ಎಂದು ಸಂಸ್ಥೆ ಹೇಳಿದ್ದಾಗಿ ಬಹಿರಂಗಪಡಿಸಿದ ರಹಸ್ಯ ವರದಿಯಲ್ಲಿ ಉಲ್ಲೇಖಿಸಿರುವುದಾಗಿ ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
1983 ಜನವರಿ 14ರಂದು ಇಂದಿರಾಗಾಂಧಿಯವರು ಹತ್ಯೆಯಾಗುವ ಎರಡು ವರ್ಷಕ್ಕೆ ಮೊದಲು ಪ್ರಕಟಗೊಂಡ ವರದಿಯಲ್ಲಿ, ಇಂತಹ ಪರಿಸ್ಥಿತಿ ಬಂದರೆ ಕಾಂಗ್ರೆಸ್ ಪಕ್ಷ ದುರ್ಬಲವಾಗುತ್ತದೆ ಎಂದು ಬರೆಯಲಾಗಿತ್ತು ಎಂದು ಕಳೆದ ಡಿಸೆಂಬರ್ ನಲ್ಲಿ ಬಹಿರಂಗಗೊಂಡ ಗುಪ್ತಚರ ಸಂಸ್ಥೆ ವರದಿಯಿಂದ ತಿಳಿದುಬಂದಿದೆ.
ಆದರೂ ಕೂಡ 1984ರ ಅಕ್ಟೋಬರ್ ತಿಂಗಳಲ್ಲಿ ಇಂದಿರಾ ಗಾಂಧಿಯವರ ಹತ್ಯೆಯಾದ ನಂತರ ಸಂದರ್ಭಗಳು ಬದಲಾದವು. ರಾಜೀವ್ ಗಾಂಧಿ ಪ್ರಧಾನಿಯಾದರು. ಕೆಲವೇ ತಿಂಗಳಲ್ಲಿ ಅಭೂತಪೂರ್ವ ಜನ ಬೆಂಬಲದೊಂದಿಗೆ ರಾಜೀವ್ ಗಾಂಧಿ ಪ್ರಧಾನಿಯಾಗಿ ಮರು ಆಯ್ಕೆಗೊಂಡರು.
ಭಾರತದ ಮಾಹಿತಿ ಹಕ್ಕು ಕಾಯ್ದೆಯ ರೀತಿ ಇರುವ ಮಾಹಿತಿ ಸ್ವಾತಂತ್ರ್ಯದ ಕಾಯ್ದೆಯಡಿ ''1980ರ ಮಧ್ಯಭಾಗದಲ್ಲಿ ಭಾರತ; ಗುರಿಗಳು ಮತ್ತು ಸವಾಲುಗಳು'' ಎಂಬ ವರದಿಯನ್ನು ಗುಪ್ತಚರ ಸಂಸ್ಥೆ ಬಿಡುಗಡೆ ಮಾಡಿತು.
30ಕ್ಕೂ ಹೆಚ್ಚು ಪುಟಗಳನ್ನು ಹೊಂದಿರುವ ವರದಿಯಲ್ಲಿ 1980ರ ಮಧ್ಯಭಾಗದಲ್ಲಿ ಭಾರತದ ಭವಿಷ್ಯ ಮತ್ತು ಅನೇಕ ರಾಜಕೀಯ ಸನ್ನಿವೇಶಗಳನ್ನು ದಾಖಲಿಸಲಾಗಿವೆ. 1985ರ ಲೋಕಸಭಾ ಚುನಾವಣೆಯಲ್ಲಿ ಇಂದಿರಾ ಗಾಂಧಿ ಕಡಿಮೆ ಬಹುಮತದಿಂದ ಮರು ಆಯ್ಕೆಯಾಗಿ ಬರಬಹುದೆಂದು ಮತ್ತು ಒಂದು ವೇಳೆ ಆಕೆ ಹಠಾತ್ ನಿಧನ ಹೊಂದಿದರೆ ಏನಾಗಬಹುದೆಂದು ಕೂಡ ವರದಿಯಲ್ಲಿ ವಿವರಿಸಲಾಗಿದೆ.
ಇಂದಿರಾ ಗಾಂಧಿಯವರು ಹಠಾತ್ ನಿಧನ ಹೊಂದಿದರೆ ರಾಷ್ಟ್ರಪತಿ ಝೈಲ್ ಸಿಂಗ್ ಜೊತೆ ನಿಕಟವರ್ತಿಯಾಗಿರುವ ರಾಜೀವ್ ಗಾಂಧಿಯವರು ಮುಂದಿನ ಪ್ರಧಾನಿ ಆಯ್ಕೆಯಲ್ಲಿ ಬಹಳ ಪ್ರಭಾವಶಾಲಿಯಾಗುತ್ತಾರೆ. ರಾಜೀವ್ ಗಾಂಧಿಯವರೇ ಈ ಸಂದರ್ಭದಲ್ಲಿ ಪ್ರಧಾನಿಯಾಗುವ ಸಾಧ್ಯತೆ ತೀರಾ ಅನಿಶ್ಚಿತವಾಗಿದೆ. ಅವರು ರಾಜಕೀಯ ಅಪ್ರಬುದ್ಧರಾಗಿದ್ದು ಮತ್ತು ರಾಜಕೀಯದಲ್ಲಿ ಕೆಳ ಹಂತದ ಸ್ಥಾನ ಹೊಂದಿದ್ದಾರೆ ಎಂದು ಗುಪ್ತಚರ ಸಂಸ್ಥೆ ತನ್ನ ರಹಸ್ಯ ವರದಿಯಲ್ಲಿ ಹೇಳಿತ್ತು.
ಇಂದಿರಾ ಗಾಂಧಿಯವರು ಇನ್ನಷ್ಟು ವರ್ಷ ಪ್ರಧಾನಿಯಾಗಿದ್ದರೆ ರಾಜೀವ್ ಗಾಂಧಿಯವರ ಭವಿಷ್ಯ ಉತ್ತಮವಾಗಬಹುದು. ರಾಜೀವ್ ಗಾಂಧಿ ತನ್ನ ತಾಯಿಯಂತೆ ಒಬ್ಬ ರಾಜಕೀಯ ಕಾರ್ಯತಂತ್ರನಾಗಿ ಹೊರಹೊಮ್ಮದಿದ್ದರೆ ಅಥವಾ ಪಕ್ಷ ಸಂಘಟನೆ ಮಾಡದಿದ್ದರೆ ಅವರು ಒಂದು ವೇಳೆ ಪ್ರಧಾನಿಯಾದರೂ ಕೂಡ ಅಧಿಕಾರದಲ್ಲಿ ಸ್ವಲ್ಪ ಕಾಲ ಮಾತ್ರ ಇರುತ್ತಾರೆ ಎಂದು ಕೂಡ ಸಂಸ್ಥೆ ವರದಿಯಲ್ಲಿ ಉಲ್ಲೇಖಿಸಿತ್ತು.
ಗುಪ್ತಚರ ಸಂಸ್ಥೆ ವರದಿಯಲ್ಲಿ ಸರ್ಕಾರದ ಸಂಪುಟ ದರ್ಜೆ ಸಚಿವರಾದ ಆರ್.ವೆಂಕಟರಾಮನ್, ವಿದೇಶಾಂಗ ಸಚಿವ ಪಿ.ವಿ.ನರಸಿಂಹ ರಾವ್, ಹಣಕಾಸು ಸಚಿವ ಪ್ರಣಬ್ ಮುಖರ್ಜಿ, ಕೈಗಾರಿಕಾ ಖಾತೆ ಸಚಿವ ನಾರಾಯಣ್ ದತ್ ತಿವಾರಿ ಮೊದಲಾದವರು ಪ್ರಧಾನಿ ಹುದ್ದೆಗೆ ಅರ್ಹರೆಂದು ಉಲ್ಲೇಖಿಸಲಾಗಿತ್ತು.
ಜಾಗತಿಕ ಮಟ್ಟದಲ್ಲಿ ಗುಪ್ತಚರ ಸಂಸ್ಥೆಗಳು ದೇಶದಲ್ಲಿ ತಮ್ಮ ಆಸಕ್ತಿಯ ವಿವಿಧ ರಾಜಕೀಯ ಸನ್ನಿವೇಶಗಳ ಕುರಿತು ಚರ್ಚಿಸುತ್ತದೆ.