ನವದೆಹಲಿ: ಡೊಕ್ಲಾಂ ವಿವಾದ ಸಂಬಂಧ ಭಾರತ ಮತ್ತು ಚೀನಾ ನಡುವಿನ ಸಂಘರ್ಷ ತಾರಕಕ್ಕೇರಿರುವಂತೆಯೇ ಇತ್ತ ಸೇನೆ ರಕ್ಷಣಾ ಇಲಾಖೆ ತ್ವರಿತವಾಗಿ ಶಸ್ತ್ರಾಸ್ತ್ರ ಖರೀದಿಗೆ ಹೆಚ್ಚುವರಿ 20 ಸಾವಿರ ಕೋಟಿ, ರುಗಳಿಗೆ ಕೇಂದ್ರ ಸರ್ಕಾರದ ಬಳಿ ಬೇಡಿಕೆ ಇಟ್ಟಿದೆ.
ಮಂಗಳವಾರವೇ ಈ ಬಗ್ಗೆ ರಕ್ಷಣಾ ಇಲಾಖೆ ಕೇಂದ್ರದ ವಿತ್ತ ಸಚಿವಾಲಯಕ್ಕೆ ಪ್ರಸ್ತಾವನೆ ಮುಂದಿಟ್ಟಿದ್ದು, ಸೇನೆಗೆ ಅಗತ್ಯವಿರುವ ತುರ್ತು ಪರಿಕರಗಳು ಮತ್ತು ಶಸ್ತ್ರಾಸ್ತ್ರಗಳ ಖರೀದಿಗೆ 20 ಸಾವಿರ ಕೋಟಿ ನೆರವು ನೀಡಬೇಕು ಎಂದು ಮನವಿ ಮಾಡಿದೆ. ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ರಕ್ಷಣಾ ಕಾರ್ಯದರ್ಶಿ ಸಂಜಯ್ ಮಿತ್ರಾ ಅವರು, ವಿತ್ತ ಸಚಿವಲಾಯದ ಕಾರ್ಯದರ್ಶಿಗಳೊಂದಿಗೆ ನಡೆದ ಸಭೆಯಲ್ಲಿ ತುರ್ತು ಶಸ್ತ್ರಾಸ್ತ್ರ ಖರೀದಿಗೆ 20 ಸಾವಿರ ಕೋಟಿ ರು. ಬಿಡುಗಡೆ ಮಾಡುವಂತೆ ಕೋರಲಾಗಿದೆ.
ಕಳೆದ ಬಜೆಟ್‌ನಲ್ಲಿ 2.74 ಲಕ್ಷ ಕೋಟಿಯನ್ನು ರಕ್ಷಣಾ ಇಲಾಖೆಗೆ ಮೀಸಲಾಗಿರಿಸಲಾಗಿತ್ತು. ಆದಾಗ್ಯೂ ರಕ್ಷಣಾ ಇಲಾಖೆ 20 ಸಾವಿರ ಕೋಟಿ ಹೆಚ್ಚಿನ ಅನುದಾನ ಕೇಳಿದೆ. ಇತ್ತೀಚೆಗೆ 40 ಸಾವಿರ ಕೋಟಿ ರು.ಗಳಷ್ಟು ಶಸ್ತ್ರಾಸ್ತ್ರಗಳ ನೇರ ಖರೀದಿಗೆ ಸೇನೆಗೆ ಕೇಂದ್ರ ಸರ್ಕಾರ ಅವಕಾಶ ಮಾಡಿಕೊಟ್ಟಿತ್ತು. ಅದರನ್ವಯ ಹೆಚ್ಚುವರಿಯಾಗಿ 20 ಸಾವಿರ ಕೋಟಿ ರು.ಗಳ ಶಸ್ತ್ರಾಸ್ತ್ರ ಖರೀದಿಗೆ ಅವಕಾಶ ಕೇಳಿದೆ.
ರಕ್ಷಣಾ ಇಲಾಖೆಯ ಮೂಲಗಳ ಪ್ರಕಾರ ಮುಂದಿನ ಐದು ವರ್ಷಗಳ ಅವಧಿಯಲ್ಲಿ ಸೇನೆಯ ಆಧುನೀಕರಣಕ್ಕೆ 26.84 ಲಕ್ಷ ಕೋಟಿ ರುಗಳ ಅಗತ್ಯತೆ ಇದ್ದು, 13ನೇ ರಕ್ಷಣಾ ಯೋಜನೆಗಳ ಅನ್ವಯ (2017-2022) ಸೇನಾ ಆಧುನೀಕರಣಕ್ಕೆ ಯೋಜನೆ ರೂಪಿಸಲಾಗಿದೆ. ಈಗಾಗಲೇ ರಕ್ಷಣಾ ಇಲಾಖೆಯ ವಾರ್ಷಿಕ ಆದಾಯ ಕೂಡ ಶೇ.2ರಷ್ಟು ವೃದ್ಧಿಯಾಗಿದ್ದು, ಇದನ್ನು ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿಸಲು ಯೋಜನೆ ರೂಪಿಸಲಾಗಿದೆ. ಅಂತೆಯೇ ಪಾಕಿಸ್ತಾನ, ಚೀನಾದಂತಹ ಬಾಹ್ಯ ಬೆದರಿಕೆಗಳನ್ನು ದಿಟ್ಟವಾಗಿ ಎದುರಿಸುವ ನಿಟ್ಟಿನಲ್ಲಿ ಭಾರತ ಸಶಸ್ತ್ರ ಸೇನೆಯನ್ನು ಆಧುನೀಕರಣ ಗೊಳಿಸುವ ನಿಟ್ಟಿನಲ್ಲಿ ಮಹತ್ವದ ಯೋಜನೆಗಳನ್ನು ರೂಪಿ,ಲಾಗಿದೆ ಎಂದು ತಿಳಿದುಬಂದಿದೆ