ಲಖನೌ: ಗೋರಕ್ ಪುರ ಬಿಆರ್ ಡಿ ಆಸ್ಪತ್ರೆಯಲ್ಲಿ ನಡೆದ ಮಕ್ಕಳ ಸಾವಿನ ಪ್ರಕರಣದ ನೈತಿಕ ಹೊಣೆ ಹೊತ್ತು ಉತ್ತರ ಪ್ರದೇಶದ ಆರೋಗ್ಯ ಸಚಿವರು ಹಾಗೂ ವೈದ್ಯಕೀಯ ಶಿಕ್ಷಣ ಸಚಿವರು ರಾಜಿನಾಮೆ ನೀಡಬೇಕು ಎಂದು ಕಾಂಗ್ರೆಸ್ ಮುಖಂಡ ಗುಲಾಂ ನಬಿ ಆಜಾದ್ ಹೇಳಿದ್ದಾರೆ.
ಗೋರಕ್ ಪುರ ಆಸ್ಪತ್ರೆ ದುರಂತದ ಹಿನ್ನಲೆಯಲ್ಲಿ ಇಂದು ದೆಹಲಿಯಿಂದ ಆಗಮಿಸಿದ ಕಾಂಗ್ರೆಸ್ ನಿಯೋಗ ದುರಂತ ನಡೆದ ಬಿಆರ್ ಡಿ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಕಲೆಹಾಕಿತು. ಕಾಂಗ್ರೆಸ್ ಹಿರಿಯ ಮುಖಂಡ ಗುಲಾಂ ನಬಿ ಆಜಾದ್, ರಾಜ್ ಬಬ್ಬರ್ ನೇತೃತ್ವದ ನಿಯೋಗ ಆಸ್ಪತ್ರೆಗೆ ಭೇಟಿ ನೀಡಿತು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಗುಲಾಂ ನಬಿ ಆಜಾದ್ ಅವರು, ಪ್ರಕರಣದಲ್ಲಿ ರಾಜ್ಯ ಸರ್ಕಾರದ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಆರೋಗ್ಯ ಸಿಚವ ಮತ್ತು ವೈದ್ಯಕೀಯ ಶಿಕ್ಷಣ ಸಚಿವರು ಪ್ರಕರಣದ ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಬೇಕು ಎಂದು ಅವರು ಹೇಳಿದರು.
ಅಂತೆಯೇ ಸಿಎಂ ಯೋಗಿ ಆದಿತ್ಯಾನಾಥ್ ಅವರ ಬಗ್ಗೆಯೂ ಮಾತನಾಡಿದ ಗುಲಾಂ ನಬಿ ಆಜಾದ್ ಅವರು, ಹತ್ತಾರು ಅಮಾಯಕ ಮಕ್ಕಳ ಸಾವಿಗೆ ಶರಣಾಗಿದ್ದು, ನಿಜಕ್ಕೂ ಇಂತಹ ಘಟನೆ ಮರುಕಳಿಸಬಾರದು. ದುರಂತಕ್ಕೆ ರಾಜ್ಯ ಸರ್ಕಾರದ ದಿವ್ಯ ನಿರ್ಲಕ್ಷ್ಯವೇ ಕಾರಣವಾಗಿದ್ದು, ಯೋಗಿ ಆದಿತ್ಯಾನಾಥ್ ಅವರು ಯಾವುದೇ ಕಾರಣಕ್ಕೂ ಜಬಾವ್ದಾರಿಯಿಂದ ನುಣಿಚಿಕೊಳ್ಳುವಂತಿಲ್ಲ. ಸಿಎಂ ತನಿಖೆಗೆ ಆದೇಶ ನೀಡಿದರೆ ಸಾಲದು. ತಪ್ಪಿತಸ್ಥರನ್ನು ಕಠಿಣವಾಗಿ ಶಿಕ್ಷಿಸಬೇಕು. ಅಂತಯೇ ಕೂಡಲೇ ಅವರು ಪ್ರಜೆಗಳ ಕ್ಷಮೆ ಕೇಳಬೇಕು ಎಂದು ಗುಲಾಂ ನಬಿ ಆಜಾದ್ ಹೇಳಿದರು.