ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳು
ನವದೆಹಲಿ: ಸುಮಾರು 70 ಮಕ್ಕಳನ್ನು ಬಲಿ ಪಡೆದ ಗೋರಕ್'ಪುರ ಆಸ್ಪತ್ರೆ ದುರಂತಕ್ಕೆ ಸಂಬಂಧಸಿದಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ(ಎನ್ಎಚ್ ಆರ್ ಸಿ) ಸೋಮವಾರ ಉತ್ತರ ಪ್ರದೇಶ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದ್ದು, ಘಟನೆ ಬಗ್ಗೆ ವರದಿ ನೀಡುವಂತೆ ಸೂಚಿಸಿದೆ.
ಮಕ್ಕಳ ಸಾವು ಅತ್ಯಂತ ಕರುಣಾಜನಕ ಎಂದಿರುವ ಮಾನಹ ಹಕ್ಕುಗಳ ಆಯೋಗ, ಈ ಕುರಿತು ಮುಂದಿನ ನಾಲ್ಕು ವಾರಗಳಲ್ಲಿ ಪರಿಹಾರ ಮತ್ತು ಸಂತ್ರಸ್ತ ಕುಟುಂಬಗಳ ಪುನರ್ವಸತಿ ಸೇರಿದಂತೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸರ್ಕಾರ ತೆಗೆದುಕೊಂಡ ಕ್ರಮದ ಬಗ್ಗೆ ಸಮಗ್ರ ವರದಿ ನೀಡುವಂತೆ ಉತ್ತರ ಪ್ರದೇಶ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ನೋಟಿಸ್ ನೀಡಿದೆ.
ರಾಜ್ಯ ಸರ್ಕಾರದ ಬಾಬಾ ರಾಘವ್ ದಾಸ್ ಕಾಲೇಜ್ ಮತ್ತು ಆಸ್ಪತ್ರೆಯಲ್ಲಿ ಆಗಸ್ಟ್ 7ರಿಂದ ಇದುವರೆಗೆ 70 ಮಕ್ಕಳು ಮೃತಪಟ್ಟಿದ್ದು, ಇದಕ್ಕೆ ಆಮ್ಲಜನಕದ ಪೂರೈಕೆಯಲ್ಲಿ ಆದ ವ್ಯತ್ಯಯ ಕಾರಣ ಎಂದು ಆರೋಪಿಸಲಾಗಿದೆ.
ಈ ದುರಂತಕ್ಕೆ ಆಮ್ಲಜನಕದ ಪೂರೈಕೆಯಲ್ಲಿನ ನಿರ್ಲಕ್ಷವೇ ಕಾರಣ ಎಂಬ ಮಾಧ್ಯಮಗಳ ವರದಿಯನ್ನು ಆಧರಿಸಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದು, ಈ ಸಂಬಂಧ ಉತ್ತರ ಪ್ರದೇಶ ಸರ್ಕಾರಕ್ಕೆ ನೋಟಿಸ್ ನೀಡಿದೆ.