ಮುಂಬೈ: ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಮುಂಬೈನಲ್ಲಿ ಮಂಗಳವಾರ ನಡೆದ ದಹಿ ಹಂಡಿ ಉತ್ಸವದ ವೇಳೆ ಮಾನವ ಪಿರಮಿಡ್ ನಿರ್ಮಿಸುತ್ತಿದ್ದಾಗ ಕನಿಷ್ಠ 45 ಮಂದಿ ಗಾಯಗೊಂಡಿದ್ದಾರೆ.
ಇಂದು ಸಂಜೆ 5 ಗಂಟೆಯವರೆಗೆ ದಹಿ ಹಂಡಿ ಉತ್ಸವದ ವೇಳೆ ಸುಮಾರು 45ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ನಗರ ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
ಗಾಯಾಳುಗಳ ಪೈಕಿ ಓರ್ವನ ಸ್ಥಿತಿ ಚಿಂತಾಜನಕವಾಗಿದ್ದು, ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇತರೆ ಗಾಯಾಳುಗಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಡಿಸ್ಚಾರ್ಜ್ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.
ಮಹಾರಾಷ್ಟ್ರದ ಪ್ರಮುಖ ಉತ್ಸವಗಳಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಮರುದಿನ ಆಚರಿಸುವ ‘ದಹಿ ಹಂಡಿ’ಯೂ ಒಂದು. ಮಾನವ ಪಿರಮಿಡ್‌ಗಳ ಮೂಲಕ ಎತ್ತರದಲ್ಲಿರುವ ಮೊಸರಿನ ಮಡಕೆಯನ್ನು ತಲುಪಿ, ಅದನ್ನು ಒಡೆಯುವ ಆಟದ ಉತ್ಸವವಿದು. ಈ ಅಪೂರ್ವವಾದ ದೃಶ್ಯವನ್ನು ವೀಕ್ಷಿಸಲು ದೇಶ ವಿದೇಶಗಳಿಂದ ಪ್ರವಾಸಿಗರು ಬರುವುದಿದೆ. ಪಿರಮಿಡ್ ರಚಿಸುವವರನ್ನು ‘ಗೋವಿಂದಾ ತಂಡ’ವೆಂದು ಕರೆಯಲಾಗುತ್ತದೆ.