ಶ್ರೀನಗರ: ಪ್ರಧಾನಿ ನರೇಂದ್ರ ಮೋದಿ ಅವರ ಜಮ್ಮು ಮತ್ತು ಕಾಶ್ಮೀರ ಸಮಸ್ಯೆಗೆ ಶಾಶ್ವತ ಪರಿಹಾರ ಕುರಿತಂತೆ 71ನೇ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿನ ಹೇಳಿಕೆಯನ್ನು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಸ್ವಾಗತಿಸಿದ್ದಾರೆ.
ಕೆಂಪುಕೋಟೆ ಮೇಲೆ ಧ್ವಜಾರೋಹಣ ಮಾಡಿ ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು ಕಾಶ್ಮೀರ ಸಮಸ್ಯೆ ಘರ್ಷಣೆ ಹಾಗೂ ಗುಂಡಿನಿಂದ ಬಗೆಹರಿಯುವುದಿಲ್ಲ, ಶಾಂತಿ ಹಾಗೂ ಜನರ ಪ್ರೀತಿಯಿಂದ ಬಗೆಹರಿಸಬಹುದು ಎಂದು ಹೇಳಿದ್ದರು.
15 ವರ್ಷಗಳ ಹಿಂದೆ ತಮ್ಮ ಪಕ್ಷದ ಘೋಷಣೆ ಕೂಡ ಇದೇ ಆಗಿತ್ತು ಎಂದು ಹೇಳಿರುವ ಮುಫ್ತಿ ಅವರು ಗನ್ ಹಾಗೂ ಗುಂಡಿನಿಂದ ಯಾವ ಸಮಸ್ಯೆಯೂ ಬಗೆಹರಿಯಲ್ಲ ಎಂದರು. ಇನ್ನು ಪ್ರತ್ಯೇಕತಾವಾದಿ ನಾಯಕ ಮಿರ್ವೈಜ್ ಉಮರ್ ಫಾರೂಕ್ ಕೂಡ ಮೋದಿ ಅವರ ಹೇಳಿಕೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಇನ್ನು ಪ್ರಧಾನಿ ಮೋದಿ ಹೇಳಿಕೆ ಕುರಿತಂತೆ ಮಾಜಿ ಮುಖ್ಯಮಂತ್ರಿ, ನ್ಯಾಷನಲ್ ಕಾನ್ಫರೆನ್ಸ್ ಮುಖಂಡ ಒಮರ್ ಅಬ್ದುಲ್ಲಾ ಕಿಡಿಕಾರಿದ್ದಾರೆ. ಕಾಶ್ಮೀರ ಬಿಕ್ಕಟ್ಟು ಗುಂಡುಗಳಿಂದಾಗಲೂ ಅಥವಾ ಬೈಗುಳಗಳಿಂದಾಗಲೀ ಬಗೆಹರಿಯುವುದಿಲ್ಲ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹೇಳುತ್ತಿದ್ದಾರೆ. ಕಾಶ್ಮೀರದಲ್ಲಿ ಒಂದೆಡೆ ಉಗ್ರರು ಗುಂಡು ಹಾರಿಸುತ್ತಿದ್ದಾರೆ, ಮತ್ತೊಂದೆಡೆ ಭದ್ರತಾ ಸಿಬ್ಬಂದಿಗಳು ಗುಂಡು ಹಾರಿಸುತ್ತಿದ್ದಾರೆ, ಉಗ್ರರು ಹಾಗೂ ಭದ್ರತಾ ಪಡೆಗಳ ನಡುವಿನ ಘರ್ಷಣೆಗಳಿಂದಾಗಿ ಕಾಶ್ಮೀರ ಸಮಸ್ಯೆ ಬಗೆಹರಿಯುತ್ತಿಲ್ಲ ಎಂದು ಹೇಳಿದ್ದಾರೆ.