ನವದೆಹಲಿ: ಲಡಾಕ್ ಪ್ರಾಂತ್ಯದಲ್ಲಿ ಚೀನಾ ಸೈನಿಕರು ಗಡಿ ರೇಖೆ (ಎಲ್ಎಸಿ) ಅತಿಕ್ರಮಣ ಮಾಡಿ ಪ್ರವೇಶಿಸಲು ಯತ್ನಿಸಿದ ಘಟನೆ ನಂತರ ಲೇಹ್ ನಲ್ಲಿ ಭಾರತ-ಚೀನಾ ಸೇನಾ ಅಧಿಕಾರಿಗಳು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ.
ಅಧಿಕೃತ ಮೂಲಗಳ ಪ್ರಕಾರ ಲಡಾಕ್ ಪ್ರಾಂತ್ಯದ ಭಾರತ- ಚೀನಾ ಗಡಿಯಲ್ಲಿ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಮತುಕತೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ. ಪ್ಯಾಂಗಾಂಗ್ ಸರೋವರದ ಬಳಿಯ 'ಫಿಂಗರ್ 4" ಹಾಗೂ 'ಫಿಂಗರ್ 5' ಭೂಭಾಗದಲ್ಲಿ ನಿನ್ನೆ ಬೆಳಿಗ್ಗೆ 6 ರಿಂದ 9ರವರೆಗೆ ವಾಸ್ತವ ಗಡಿ ರೇಖೆ (ಎಲ್ಎಸಿ) ದಾಟಿ ಬರಲು ಚೀನಾ ಸೈನಿಕರು 2 ಬಾರಿ ಯತ್ನ ನಡೆಸಿತ್ತು. ಈ ವೇಳೆ ಭಾರತೀಯ ಸೇನೆ ಮಾನವ ತಡೆಗೋಡೆ ನಿರ್ಮಿಸಿ ಅವರನ್ನು ತಡೆಯಲೆತ್ನಿಸಿದ್ದರು. ಈ ವೇಳೆ ಚೀನೀ ಸೈನಿಕರು ಯೋಧರ ಮೇಲೆ ಕಲ್ಲು ತೂರಾಟ ಕೂಡ ನಡೆಸಿದ್ದರು.
ಗಡಿಯಲ್ಲಿ ಇಷ್ಟೆಲ್ಲಾ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದರೂ ಚೀನಾ ಮಾತ್ರ ಮತ್ತೆ ತನ್ನ ಕುತಂತ್ರ ಬುದ್ಧಿಯನ್ನು ಪ್ರದರ್ಶಿಸಿದೆ. ಗಡಿಯಲ್ಲಿ ಚೀನಾ ಹಾಗೂ ಭಾರತೀಯ ಸೇನೆ ನಡುವಿನ ಸಂಘರ್ಷ ನಡೆದಿರುವುದರ ಬಗ್ಗೆ ಮಾಹಿತಿಯೇ ಇಲ್ಲ ಎಂದು ಚೀನಾ ಹೇಳಿಕೊಂಡಿತ್ತು. ಈ ಬೆನ್ನಲ್ಲೇ ಉಭಯ ರಾಷ್ಟ್ರಗಳ ಸೇನಾ ಅಧಿಕಾರಿಗಳು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ.