ದೇಶ

ಜಯಾ ಪೊಯೆಸ್‌ ಗಾರ್ಡನ್‌ ನಿವಾಸ ಸ್ಮಾರಕವಾಗಿ ಪರಿವರ್ತಿಸಲು ದೀಪಾ ವಿರೋಧ

Lingaraj Badiger
ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿ.ಜೆ. ಜಯಲಲಿತಾ ಅವರ ಪೊಯೆಸ್‌ ಗಾರ್ಡನ್‌ ನಿವಾಸವನ್ನು ಸ್ಮಾರಕವನ್ನಾಗಿ ಪರಿವರ್ತಿಸಲು ಮುಂದಾಗಿರುವ ತಮಿಳುನಾಡು ಸರ್ಕಾರದ ಕ್ರಮವನ್ನು ಜಯಲಲಿತಾ ಅವರ ಸೋದರ ಸೊಸೆ ದೀಪಾ ಜಯಕುಮಾರ್‌ ಅವರು ವಿರೋಧಿಸಿದ್ದಾರೆ.
ನಿನ್ನೆಯಷ್ಟೆ ತಮಿಳುನಾಡು ಮುಖ್ಯಮಂತ್ರಿ ಕೆ ಪಳನಿಸ್ವಾಮಿ ಅವರು, ಜಯಲಲಿತಾ ಸಾವಿನ ಕುರಿತು ತನಿಖೆಗೆ ಮದ್ರಾಸ್‌ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಯೊಬ್ಬರ ನೇತೃತ್ವದಲ್ಲಿ ಆಯೋಗ ರಚಿಸುವುದಾಗಿ ಹಾಗೂ ಅವರ ಪೊಯೆಸ್‌ ಗಾರ್ಡನ್‌ ನಿವಾಸವನ್ನು ಸ್ಮಾರಕವಾಗಿ ಪರಿವರ್ತಿಸಲಾಗುವುದು ಮತ್ತು ಸರ್ಕಾರವೇ ಅದನ್ನು ನಿರ್ವಹಣೆ ಮಾಡಲಿದೆ ಎಂದು ಘೋಷಿಸಿದ್ದರು.
ತಮಿಳುನಾಡು ಸರ್ಕಾರದ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿರುವ ದೀಪಾ ಜಯಕುಮಾರ್‌ ಅವರು, ಜಯಲಲಿತಾ ಅವರ ನಿವಾಸದ ಮೇಲೆ ತಮಗೆ ನೈತಿಕ ಮತ್ತು ಕಾನೂನಿನ ಹಕ್ಕಿದೆ ಎಂದು ಹೇಳಿದ್ದಾರೆ.
ಪೊಯೆಸ್ ಗಾರ್ಡನ್ ಆಸ್ತಿಯಲ್ಲಿ ಪಾಲುದಾರಿಕೆಗೆ ನೈತಿಕ ಮತ್ತು ಕಾನೂನಾತ್ಮಕ ಹಕ್ಕುಗಳನ್ನು ಹೊಂದಿದ್ದೇವೆ. ಈ ವಿಷಯದಲ್ಲಿ ಮುಖ್ಯಮಂತ್ರಿ ಅವರ ಘೋಷಣೆಯ ಹಿಂದೆ ಕೆಲವು ದುರು‌ದ್ದೇಶಗಳಿವೆ ಎಂದು ದೀಪಾ ದೂರಿದ್ದಾರೆ. ಅಲ್ಲದೆ ಈ ಸಂಬಂಧ ಸರ್ಕಾರದ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಇಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.
SCROLL FOR NEXT