ದೇಶ

ರಾಜ್ಯದ ವಿಚಾರದಲ್ಲಿ ಕೇಂದ್ರ ತಲೆ ಹಾಕುತ್ತಿರುವುದರಿಂದಲೇ ಗೊಂದಲ ಸೃಷ್ಟಿ: ಎಐಎಡಿಎಂಕೆ ಶಾಸಕರು

Manjula VN
ಚೆನ್ನೈ: ನಿರೀಕ್ಷೆಯಂತೆಯೇ ಅಣ್ಣಾ ಡಿಎಂಕೆಯ ಎಡಪ್ಪಾಡಿ ಕೆ. ಪಳನಿಸ್ವಾಮಿ ಹಾಗೂ ಒ.ಪನ್ನೀರ್ ಸೆಲ್ವಂ ಬಣಗಳು ಒಂದಾಗುತ್ತಿದ್ದಂತೆಯೇ ಪಕ್ಷದ ಮುಖ್ಯಸ್ಥರಾದ ವಿ.ಕೆ ಶಶಿಕಲಾ ಹಾಗೂ ಟಿಟಿವಿ ದಿನಕರನ್ ಬಣ ಬಂಡಾಯ ಎದ್ದಿದೆ. ರಾಜ್ಯ ಸರ್ಕಾರದ ವಿಚಾರದಲ್ಲಿ ಕೇಂದ್ರ ಸರ್ಕಾರ ತಲೆ ಹಾಕುತ್ತಿರುವುದರಿಂದಲೇ ಗೊಂದಲಗಳು ಸೃಷ್ಠಿಯಾಗುತ್ತಿದೆ ಎಂದು ಎಐಎಡಿಎಂಕೆ ಶಾಸಕರು ಹೇಳಿದ್ದಾರೆ. 
ನಿನ್ನೆಯಷ್ಟೇ 19 ಶಾಸರು ರಾಜ್ಯಪಾಲ ಸಿ. ವಿದ್ಯಾಸಾಗರ ರಾವ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಪನ್ನೀರ್ ಸೆಲ್ವಂ ಅವರು ನಮ್ಮ ಮೇಲೆ ಅನೇಕ ಆರೋಪ ಮಾಡಿದ್ದರು. ಪ್ರಸ್ತುತ ಮುಖ್ಯಮಂತ್ರಿಗಳ ಮೇಲೆಯೇ ನಮಗೆ ವಿಶ್ವಾಸವಿಲ್ಲದಂತಾಗಿದೆ. ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ ನೇತೃತ್ವದ ಸರ್ಕಾರಕ್ಕೆ ನಮ್ಮ ಬೆಂಬಲವಿಲ್ಲ, ಕೂಡಲೇ ಅವರನ್ನು ವಜಾ ಮಾಡಿ ಎಂದು ಆಗ್ರಹಿಸಿದ್ದರು.
ಈ ನಡುವೆ ಶಶಿಕಲಾ ಅವರನ್ನು ವಜಾ ಮಾಡುವುದಾಗಿ ಹೇಳಿಕೆ ನೀಡಿದ್ದ ಅಣ್ಣಾಡಿಎಂಕೆ ಮುಖಂಡ ವೈದ್ಯಲಿಂಗ್ ಅವರನ್ನು ಟಿಟಿವಿ ದಿನಕರನ್ ಅವರು ಪಕ್ಷದಿಂದಲೇ 6 ವರ್ಷ ಅವಧಿಗೆ ಉಚ್ಚಾಟಿಸಿದ್ದಾರೆ. 
ರಾಜ್ಯದ ರಾಜಕೀಯದಲ್ಲಾಗುತ್ತಿರುವ ಬೆಳವಣಿಗೆಗಳ ಕುರಿತಂತೆ ಪ್ರತಿಕ್ರಿಯೆ ನೀಡಿರುವ ವಿರೋಧ ಪಕ್ಷಗಳ ನಾಯಕ ಎಂ.ಕೆ ಸ್ಟಾಲಿನ್ ಅವರು, ರಾಜ್ಯಪಾಲರು ಕೂಡಲೇ ವಿಶೇಷ ಅಧಿವೇಶನ ಕರೆಯಬೇಕಿದ್ದು, ಎಡಪ್ಪಾಡಿ ಪಳನಿಸ್ವಾಮಿಯವರ ಸರ್ಕಾರಕ್ಕೆ ವಿಶ್ವಾಸಮತ ಸಾಬೀತು ಪಡಿಸುವಂತೆ ಸೂಚಿಸಬೇಕೆಂದು ಆಗ್ರಹಿಸಿದ್ದಾರೆ. 
ಒಂದಾದ ಒಡಪ್ಪಾಡಿ ಹಾಗೂ ಸೆಲ್ವಂ ಬಣಗಳು ಪಕ್ಷದಿಂದ ದಿನಕರನ್ ಹಾಗೂ ಶಶಿಕಲಾರನ್ನು ಉಚ್ಛಾಟಿಸುವ ಯತ್ನ ನಡೆಸಿದ್ದವು. ಇದೇ ಸಂದರ್ಭದಲ್ಲಿ ದಿನಕರನ್ ಅವರು 19 ಶಾಸಕರನ್ನು ಒಗ್ಗೂಡಿಸಿ ತಮ್ಮ ಬೆಂಬಲಕ್ಕೆ ನಿಲ್ಲಿಸಿಕೊಳ್ಳುವುದರೊಂದಿಗೆ ಒಂದಾದ ಸಂಭ್ರಮದಲ್ಲಿದ್ದ ಎಡಪ್ಪಾಡಿ ಹಾಗೂ ಸೆಲ್ವಂ ಅವರಿಗೆ ನಡುಕ ಹುಟ್ಟಿಸಿದ್ದಾರೆ. 
ಟಿಟಿವಿ ಅವರ ಈ ತಂತ್ರಗಾರಿಕೆಯು ಅಣ್ಣಾಡಿಎಂಕೆಯನ್ನು ಸೇರಿಸಿಕೊಂಡು ದಕ್ಷಿಣ ರಾಜ್ಯದಲ್ಲಿ ಎನ್ ಡಿಎ ಸರ್ಕಾರ ಸ್ಥಾಪಿಸುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಯತ್ನಕ್ಕೂ ಹಿನ್ನಡೆಯುಂಟಾಗಬಹುದು ಎಂಬ ಮಾತುಗಳು ಕೇಳಿಬರತೊಡಗಿವೆ. ಇದರಿಂದಾಗಿ ರಾಜ್ಯಪಾಲರ ನಡೆಯ ಮೇಲೆ ದೃಷ್ಟಿ ನೆಟ್ಟಿದೆ. 
ತಮಿಳುನಾಡು ವಿಧಾನಸಭೆಯಲ್ಲಿ 234 ಶಾಸಕರಿದ್ದು, ಬಹುಮತಕ್ಕೆ 118 ಶಾಸಕ ಬೆಂಬಲ ಬೇಕಿದೆ. ಆಧರೆ, 1 ಸ್ಥಾನ ಖಾಲಿ ಇರುವ ಕಾರಣ ಬಹುಮತಕ್ಕೆ 117 ಶಾಸಕರು ಸಾಕು. ಅಣ್ಣಾಡಿಎಂಕೆ 135, ವಿರೋಧ ಪಕ್ಷಗಳಾದ ಡಿಎಂಕೆ 8, ಕಾಂಗ್ರೆಸ್ 8, ಮುಸ್ಲಿಂ ಲೀಗ್ 1, ಈಗ ಟಿಟಿವಿ ದಿನಕರನ್ ಕಡೆಯ 19 ಶಾಸಕರು ಬಂಡಾಯ ಎದ್ದಿರುವ ಕಾರಣ ಸರ್ಕಾರದ ಬಲ 116ಕ್ಕೆ ಕುಸಿಯುತ್ತದೆ. 
ಹೀಗಾಗಿ ವಿಶ್ವಾಸಮತಯಾಚನೆ ಸಂದರ್ಭ ಎದುರಾದರೆ ಸರ್ಕಾರ 1 ಮತದಿಂದ ಬಿದ್ದು ಹೋಗುವ ಭೀತಿ ಎದುರಾಗಿದೆ. ಇನ್ನು ಡಿಎಂಕೆ. ಕಾಂಗ್ರೆಸ್ ಹಾಗೂ ಮುಸ್ಲಿಂ ಲೀಗ್ ಗಳು ಅಣ್ಣಾಡಿಎಂಕೆಗೆ ಬೆಂಬಲ ನೀಡುವ ಪ್ರಶ್ನೆಯೇ ಉದ್ಭವಿಸದು. ಆದರೆ, ಅಪರೇಷನ್ ಎರಡೆಲೆ ನಡೆಸಿ ಕಾಂಗ್ರೆಸ್ ಪಕ್ಷದ ಮೂರನೇ 2 ರಷ್ಟು ಶಾಸಕರನ್ನು ಸೆಳೆದರೆ ಸರ್ಕಾರದ ಉಳಿವು ಸಾಧ್ಯವಿದೆ ಎಂದು ಹೇಳಲಾಗುತ್ತಿದೆ. 
SCROLL FOR NEXT