ದೇಶ

ರಾಜಸ್ತಾನ ಸರ್ಕಾರದ ದುರುದ್ದೇಶಪೂರಿತ ಆಪಾದನೆಯ ಪ್ರಯತ್ನ: ರಾಬರ್ಟ್ ವಾದ್ರಾ

Sumana Upadhyaya

ನವದೆಹಲಿ: ಬಿಕನೇರ್ ನಲ್ಲಿ ಅಕ್ರಮ ಭೂ ಹಗರಣ ಸಂಬಂಧ ವಿಚಾರಣೆ ನಡೆಸಲು ಸಿಬಿಐಗೆ ರಾಜಸ್ತಾನ ಸರ್ಕಾರ ಮಾಡಿರುವ ಶಿಫಾರಸನ್ನು ಟೀಕಿಸಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಅಳಿಯ ರಾಬರ್ಟ್ ವಾದ್ರಾ, ಇದು ದುರುದ್ದೇಶಪೂರಿಕ ಕಾನೂನು ಪ್ರಯತ್ನ ಎಂದು ಆರೋಪಿಸಿದ್ದಾರೆ. ಬಿಕನೇರ್ ನ ಭೂ ಹಗರಣದಲ್ಲಿ ವಾದ್ರಾ ಅವರ ಕಂಪೆನಿ ಭಾಗಿಯಾಗಿದೆ ಎನ್ನಲಾಗಿದೆ.

ಈ ಕುರಿತು ತಮ್ಮ ಫೇಸ್ ಬುಕ್ ಪುಟದಲ್ಲಿ ರಾಬರ್ಟ್ ವಾದ್ರಾ, ಸರ್ಕಾರದ ಮತ್ತೊಂದು ಕಾನೂನು ದುರ್ಬಳಕೆ ಪ್ರಯತ್ನ ಬಹಿರಂಗವಾಗಿದೆ. ಮೊದಲು ರಾಜಸ್ತಾನ ಪೊಲೀಸರು 2014, ಜೂನ್ 26ರಂದು ಎಫ್ಐಆರ್ ದಾಖಲಿಸಿದ್ದರು. 3 ವರ್ಷದಲ್ಲಿ ಆರೋಪಪಟ್ಟಿ ಸಲ್ಲಿಸಿ ದಾಖಲೆಗಳಿಗೆ ಸಮ್ಮನ್ಸ್ ಹೊರಡಿಸಿದ್ದರು. ಆದರೆ ಪೊಲೀಸರಿಗೆ ಯಾವುದೇ ಸಾಕ್ಷಿಗಳು, ದಾಖಲೆಗಳು ಸಿಕ್ಕಿಲ್ಲ. ಎಫ್ಐಆರ್ ನಲ್ಲಾಗಲಿ, ಚಾರ್ಚ್ ಶೀಟ್ ನಲ್ಲಾಗಲಿ ನನ್ನ ಜೊತೆ ಗುರುತಿಸಿಕೊಂಡಿರುವ ಕಂಪೆನಿಗಳು ಕಾನೂನು ಉಲ್ಲಂಘನೆ ಮಾಡಿರುವ ಬಗ್ಗೆ ಉಲ್ಲೇಖವಾಗಿಲ್ಲ ಎಂದಿದ್ದಾರೆ.

ಪೊಲೀಸ್ ಎಫ್ಐಆರ್ ನಲ್ಲಾಗಲಿ, ಆರೋಪಪಟ್ಟಿಯಲ್ಲಾಗಲಿ ತಮ್ಮ ಮೇಲೆ ಆರೋಪ ಮಾಡಲು ಸಾಧ್ಯವಿಲ್ಲದಾಗ ರಾಜಸ್ತಾನ ಸರ್ಕಾರದ ನಿರ್ದೇಶನದಂತೆ ಜಾರಿ ನಿರ್ದೇಶನಾಲಯ ತಮಗೆ ಸುಮ್ಮನೆ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿದ್ದಾರೆ.

ಜಾರಿ ನಿರ್ದೇಶನಾಲಯ ದಾಳಿ ನಡೆಸಿ, ದಾಖಲೆಗಳನ್ನು ವಶಪಡಿಸಿಕೊಂಡು ಸಾಧ್ಯವಾದ ರೀತಿಯಲ್ಲಿ ಕಿರುಕುಳ ನೀಡುತ್ತಿದೆ. ಅದರಲ್ಲೂ ವಿಫಲರಾದಾಗ ಸಿಬಿಐ ಮೂಲಕ ದಾಳಿ  ನಡೆಸಲು ಪ್ರಯತ್ನ ಮಾಡುತ್ತಿದೆ. ಹಾಗಾದರೆ ರಾಜಸ್ತಾನ ಸರ್ಕಾರ ತನ್ನ ಪೊಲೀಸ್ ಇಲಾಖೆ ಮತ್ತು ತನಿಖೆಯಲ್ಲಿ ನಂಬಿಕೆ ಕಳೆದುಕೊಂಡಿದೆಯೇ? ನಿಮಗೆ ಸಾಧ್ಯವಾದಷ್ಟು ಕಿರುಕುಳ ನೀಡಿ, ಶಿಕ್ಷಿಸಿ ಆದರೆ ಇಂತಹ ಸುಳ್ಳುಗಳು ಸತ್ಯವನ್ನು ಮರೆಮಾಚಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಬರ್ಟ್ ವಾದ್ರಾರಿಗೆ ಸೇರಿದ ಕಂಪೆನಿ ಒಳಗೊಂಡಿರುವ ಬಿಕನೇರ್ ನ ಅಕ್ರಮ ಭೂ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುವಂತೆ ರಾಜಸ್ತಾನ ಸರ್ಕಾರ ನಿನ್ನೆ ಸಿಬಿಐಗೆ ಪತ್ರ ಬರೆದಿತ್ತು.

SCROLL FOR NEXT