ಗುರ್ಮಿತ್ ರಾಮ್ ರಹೀಮ್ ಸಿಂಗ್
ಚಂಡೀಗಢ: ಅತ್ಯಾಚಾರ ಪ್ರಕರಣದಲ್ಲಿ ಜೈಲು ಪಾಲಾಗಿರುವ ಸ್ವಯಂ ಘೋಷಿತ ದೇವಮಾನವ ಡೇರಾ ಸಚ್ಚಾ ಸೌದ ಮುಖ್ಯಸ್ಥ ಗುರ್ಮಿತ್ ರಾಮ್ ರಹೀಮ್ ಸಿಂಗ್ ಅವರನ್ನು ಸೋಮವಾರ ಪಂಚಕುಲ ಕೋರ್ಟ್ ಗೆ ಕರೆತರುವುದಿಲ್ಲ ಎಂದು ಹರಿಯಾಣ ಪೊಲೀಸ್ ಮಹಾ ನಿರ್ದೇಶಕ ಬಿಎಸ್ ಸಂಧು ಅವರು ಶನಿವಾರ ಹೇಳಿದ್ದಾರೆ.
ಹರಿಯಾಣ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಿಎಸ್ ದೇಶಿ ಅವರೊಂದಿಗೆ ಇಂದು ಜಂಟಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಂಧು, ಅತ್ಯಾಚಾರ ಪ್ರಕರಣದಲ್ಲಿ ತಪ್ಪಿತಸ್ಥರಾಗಿರುವ ರಾಮ್ ರಹೀಮ್ ಸಿಂಗ್ ಅವರಿಗೆ ಸೋಮವಾರ ಪಂಚಕುಲ ಸಿಬಿಐ ವಿಶೇಷ ಕೋರ್ಟ್ ಶಿಕ್ಷೆ ಪ್ರಮಾಣ ಪ್ರಕಟಿಸುತ್ತಿದ್ದು, ಅಂದು ಅಪರಾಧಿ ಬಾಬಾನನ್ನು ಕೋರ್ಟ್ ಗೆ ಹಾಜರುಪಡಿಸುವುದಿಲ್ಲ. ಬದಲಾಗಿ ಜೈಲಿನಲ್ಲಿಯೇ ಕೋರ್ಟ್ ಕಲಾಪಕ್ಕೆ ವ್ಯವಸ್ಥೆ ಮಾಡಲಾಗುತ್ತಿದ್ದು, ಅಲ್ಲಿಯೇ ನ್ಯಾಯಾಧೀಶರು ಶಿಕ್ಷೆಯ ಪ್ರಮಾಣ ಪ್ರಕಟಿಸಲಿದ್ದಾರೆ ಎಂದು ಹೇಳಿದ್ದಾರೆ.
ಗುರ್ಮಿತ್ ರಾಮ್ ರಹೀಮ್ ಸಿಂಗ್ ಅವರನ್ನು ವಶಕ್ಕೆ ಪಡೆದ ತಕ್ಷಣವೇ ಅವರಿಗೆ ನೀಡಲಾಗಿದ್ದ ಝಡ್ ಪ್ಲಸ್ ಭದ್ರತೆಯನ್ನು ಹಿಂಪಡೆಯಲಾಗಿದೆ ಎಂದು ದೇಶಿ ಅವರು ತಿಳಿಸಿದ್ದಾರೆ.
ಇದೇ ವೇಳೆ ಅತ್ಯಾಚಾರಿ ಬಾಬಾಗೆ ರೋಹ್ಟಕ್ ಜೈಲಿನಲ್ಲಿ ವಿಐಪಿ ಉಪಚಾರ ನೀಡಲಾಗುತ್ತಿದೆ ಎಂಬ ವರದಿಗಳನ್ನು ತಳ್ಳಿಹಾಕಿದ ಸಂಧು ಮತ್ತು ದೇಶಿ, ಬಾಬಾರನ್ನು ಒಬ್ಬ ಸಾಮಾನ್ಯ ಕೈದಿಯಂತೆ ನೋಡಿಕೊಳ್ಳಲಾಗುತ್ತಿದೆ. ಅವರಿಗೆ ಎಸಿ ಕೊಣೆ ನೀಡಲಾಗಿದೆ ಎಂಬುದು ಸುಳ್ಳು. ಜೈಲಿನ ಕೈದಿಗಳಿಗೆ ನೀಡಿದ ಆಹಾರವನ್ನೇ ರಾಮ್ ರಹೀಮ್ ಸಿಂಗ್ ಅವರಿಗೂ ನೀಡಲಾಗಿದೆ ಎಂದು ಹೇಳಿದ್ದಾರೆ.
ಇನ್ನು ದೇವಮಾನವನನ್ನು ವಶಕ್ಕೆ ಪಡೆದ ನಂತರ ಅವರೊಂದಿಗೆ ಬಂದ ಮಹಿಳೆ ರಾಮ್ ರಹೀಮ್ ಸಿಂಗ್ ಅವರ ಪುತ್ರಿ ಎಂದು ಖಚಿತಪಡಿಸಿದ್ದಾರೆ.