ಚಂಡೀಗಢ: ಅತ್ಯಾಚಾರ ಪ್ರಕರಣದಲ್ಲಿ ಜೈಲು ಪಾಲಾಗಿರುವ ಸ್ವಯಂ ಘೋಷಿತ ದೇವಮಾನವ ಗುರ್ಮಿತ್ ರಾಮ್ ರಹೀಮ್ ಸಿಂಗ್ ರ ಡೇರಾ ಸಚ್ಚಾ ಸೌದಾಗೆ ಸೇರಿದ ರಾಜ್ಯದ ಎಲ್ಲಾ ಪ್ರಾರ್ಥನಾ ಕೇಂದ್ರಗಳ ಮೇಲೆ ದಾಳಿ ನಡೆಸಿ ಶೋಧ ನಡೆಸುವಂತೆ ಶನಿವಾರ ಹರಿಯಾಣ ಸರ್ಕಾರ ಪೊಲೀಸರಿಗೆ ಆದೇಶಿಸಿದೆ.
ಹರಿಯಾಣದಲ್ಲಿರುವ ಡೇರಾ ಸಚ್ಚಾ ಸೌದಾಗೆ ಸೇರಿದ ಎಲ್ಲಾ ಪ್ರಾರ್ಥನಾ ಕೇಂದ್ರಗಳ ಮೇಲೆ ದಾಳಿ ನಡೆಸಿ ಶೋಧ ಕಾರ್ಯ ನಡೆಸುವಂತೆ ಆದೇಶಿಸಲಾಗಿದೆ ಎಂದು ರಾಜ್ಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ(ಗೃಹ) ರಾಮ್ ನಿವಾಸ್ ಅವರು ಪಿಟಿಐಗೆ ತಿಳಿಸಿದ್ದಾರೆ.
ಎಲ್ಲಾ ಡೇರಾ ಕೇಂದ್ರಗಳ ಮೇಲೆ ದಾಳಿ ನಡೆಸಿ, ಯಾವುದೇ ಶಸ್ತ್ರಾಸ್ತ್ರಗಳು ಪತ್ತೆಯಾದರೆ ಕೂಡಲೇ ಜಪ್ತಿ ಮಾಡುವಂತೆ ಭದ್ರತಾ ಸಿಬ್ಬಂದಿಗೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಅಲ್ಲದೆ ಸದ್ಯ ಹರಿಯಾಣದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಸಿರ್ಸಾ ಮತ್ತು ಪಂಚಕುಲದಲ್ಲಿ ಸೇನೆ ಮತ್ತು ಅರೆ ಸೇನಾಪಡೆಗಳನ್ನು ನಿಯೋಜಿಸಲಾಗಿದೆ ಎಂದು ನಿವಾಸ್ ತಿಳಿಸಿದ್ದಾರೆ.
ನಿನ್ನೆ ಗುರ್ಮಿತ್ ರಾಮ್ ರಹೀಮ್ ಸಿಂಗ್ ತಪ್ಪಿತಸ್ಥ ಎಂದು ಸಿಬಿಐ ವಿಶೇಷ ಕೋಟ್ ತೀರ್ಪು ನೀಡಿದ ನಂತರ ಪಂಚಕುಲದಲ್ಲಿ ನಡೆದ ಹಿಂಸಾಚಾರದಲ್ಲಿ 32 ಮಂದಿ ಮೃತಪಟ್ಟಿದ್ದರು ಮತ್ತು 250ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಈಗ ಎಚ್ಚೆತ್ತುಕೊಂಡಿರುವ ಹರಿಯಾಣ ಸರ್ಕಾರ ಡೇರಾದ ಎಲ್ಲಾ ಕೇಂದ್ರಗಳ ಮೇಲೆ ದಾಳಿ ನಡೆಸುವಂತೆ ಆದೇಶಿಸಿದೆ.