ಹಿಂಸಾಚಾರ ಪೀಡಿತ ಹರಿಯಾಣದಲ್ಲಿ ಭದ್ರತಾ ಪಡೆಗಳು
ಚಂಡೀಗಢ: ಡೇರಾ ಸಚ್ಛಾ ಸೌದಾ ಮುಖ್ಯಸ್ಥ ಗುರ್ಮಿತ್ ರಾಮ್ ರಹೀಮ್ ಸಿಂಗ್ ಅತ್ಯಾಚಾರ ಪ್ರಕರಣ ಸಂಬಂಧ ಹರಿಯಾಣ ಹಾಗೂ ಪಂಜಾಬ್ ನಲ್ಲಿ ಭುಗಿಲೆದ್ದಿದ್ದ ಹಿಂಸಾಚಾರ ಇದೀಗ ತಿಳಿಗೊಳ್ಳುತ್ತಿದ್ದು, ಜಾರಿ ಮಾಡಲಾಗಿದ್ದ ಕರ್ಫ್ಯೂವನ್ನು ಹೆಲವೆಡೆ ಅಧಿಕಾರಿಗಳು ಸಡಿಲಗೊಳಿಸಿದ್ದಾರೆಂದು ಭಾನುವಾರ ತಿಳಿದುಬಂದಿದೆ.
ಹರಿಯಾಣದಲ್ಲಿ ನಿನ್ನೆಯಿಂದ ಈ ವರೆಗೂ ಯಾವುದೇ ರೀತಿಯ ಹಿಂಸಾಚಾರ ನಡೆದಿರುವ ಕುರಿತು ವರದಿಗಳಾಗಿಲ್ಲ. ಹೀಗಾಗಿ ಹಲವೆಡೆ ಕರ್ಫ್ಯೂವನ್ನು ಅಧಿಕಾರಿಗಳು ಸಡಿಲಗೊಳಿಸಿದ್ದಾರೆ. ಪ್ರಸ್ತುತ ಹಲವೆಡೆ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು, ನಾಳೆ ನ್ಯಾಯಾಲಯ ರಾಮ್ ರಹೀಮ್ ಅವರ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸುತ್ತಿರುವ ಹಿನ್ನಲೆಯಲ್ಲಿ ಹೈಅಲರ್ಟ್ ನ್ನು ಮುಂದುವರೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಪಂಜಾಬ್ ನ ಸಿರ್ಸಾದಲ್ಲಿ ಇಂದು ಬೆಳಿಗ್ಗೆ 6 ರಿಂದ 11 ಗಂಟೆಯವರೆಗೂ ಕರ್ಫ್ಯೂವನ್ನು ಸಡಿಸಲಗೊಳಿಸಲಾಗಿತ್ತು. ಆದರೆ, ಈ ವೇಳೆ ಡೇರಾ ಬೆಂಬಲಿಕರು ಸಿಕ್ಕಸಿಕ್ಕ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದರಿಂದಾಗಿ ಮತ್ತೆ ಕರ್ಫ್ಯೂವನ್ನು ಜಾರಿ ಮುಂದುವರೆಸಲಾಗಿದೆ ಎಂದು ವರದಿಗಳು ತಿಳಿಸಿವೆ.
ಇನ್ನು ಅಂಬಾಲಾ ಮಾರ್ಗವಾಗಿ ಹೋಗುವ ದೆಹಲಿಯಿಂದ ಖತ್ರಾ ರೈಲುಗಳ ಮಾರ್ಗಗಳನ್ನು ತೆರೆಯಲಾಗಿದ್ದು, ಎಂದಿನಂತೆ ರೈಲುಗಳು ತಮ್ಮ ಸೇವೆಗಳನ್ನು ಪುನರಾರಂಭಿಸಲಿವೆ ಎಂದು ಹರಿಯಾಣ ಡಿಜಿಪಿ ಬಿ.ಎಸ್. ಸಂಧು ಅವರು ಹೇಳಿದ್ದಾರೆ.
ಪಂಜಾಬ್ ರಾಜ್ಯದಲ್ಲಿಯೂ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಸಿದಿಲ್ಲ. ಶಾಂತಿಯುತ ವಾತಾವರಣ ಮರುಕಳಿಸಿದೆ ಎಂದು ಸರ್ಕಾರದ ವಕ್ತಾರ ತಿಳಿಸಿದ್ದಾರೆ.
ಅತ್ಯಾಚಾರ ಪ್ರಕರಣದಲ್ಲಿ ದೋಷಿಯಾಗಿರುವ ರಾಮ್ ರಹೀಮ್ ಸಿಂಗ್ ಅವರ ಶಿಕ್ಷೆ ಪ್ರಮಾಣವನ್ನು ನ್ಯಾಯಾಲಯ ನ್ಯಾಯಾಲಯ ಪ್ರಕಟಿಸಲಿದ್ದು, ಸ್ವಯಂಘೋಷಿತ ದೇವಮಾನವನಿಗೆ ಕನಿಷ್ಟ 7 ವರ್ಷದಿಂದ ಗರಿಷ್ಟ, ಜೀವಾವಧಿವರೆಗೆ ಶಿಕ್ಷೆಯಾಗುವ ಸಾಧ್ಯತೆಗಳಿವೆ.
ಬಾಬಾ ಅವರನ್ನು ಐಪಿಸಿ ಸೆಕ್ಷನ್ 376 (ಅತ್ಯಾಚಾರ) ಹಾಗೂ 506 (ಕ್ರಿಮಿನಲ್ ಪ್ರಚೋದನೆ) ಪ್ರಕರಣಗಳನ್ನು ಆಧರಿಸಿ ಶುಕ್ರವಾರ ಮಧ್ಯಾಹ್ನ ಸಿಬಿಐ ವಿಶೇಷ ನ್ಯಾಯಾಧೀಶ ಜಗದೀಪ್ ಸಿಂಗ್ ಅವರು ದೋಶಿ ಎಂದು ಪ್ರಕಟಿಸಿದ್ದರು. ಬಳಿಕ ಬಾಬಾ ಅವರನ್ನು ಭದ್ರತಾ ದೃಷ್ಟಿಯಿಂದ ಹೆಲಿಕಾಪ್ಟರ್ ಮೂಲಕ ರೋಹ್ಟಕ್ ಜೈಲಿಗೆ ರವಾನಿಸಲಾಗಿತ್ತು.