ದೇಶ

ಅತ್ಯಾಚಾರಿ ಬಾಬಾ ರಾಮ್ ರಹೀಮ್ ಸಿಂಗ್ ಗೆ 20 ವರ್ಷ ಜೈಲು ಶಿಕ್ಷೆ

Lingaraj Badiger
ಚಂಡೀಗಢ: ಅತ್ಯಾಚಾರಿ ಬಾಬಾ, ಡೇರಾ ಸಚ್ಚಾ ಸೌದ ಮುಖ್ಯಸ್ಥ, ಸ್ವಯಂ ಘೋಷಿತ ದೇವಮಾನವ ಗುರ್ಮೀತ್‌ ರಾಮ್ ರಹೀಮ್ ಸಿಂಗ್‌ಗೆ ಸಿಬಿಐ ವಿಶೇಷ ಕೋರ್ಟ್ ಸೋಮವಾರ 20 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಕಳೆದ ಶುಕ್ರವಾರ ಅತ್ಯಾಚಾರ ಪ್ರಕರಣದಲ್ಲಿ ಡೇರಾ ಮುಖ್ಯಸ್ಥ ಗುರ್ಮೀತ್‌ ರಾಮ್ ರಹೀಮ್ ಸಿಂಗ್‌ ತಪ್ಪಿತಸ್ಥ ಎಂದು ತೀರ್ಪು ನೀಡಿದ್ದ ನ್ಯಾಯಾಧೀಶ ಜಗದೀಪ್ ಸಿಂಗ್ ಅವರು ಶಿಕ್ಷೆಯ ಪ್ರಮಾಣವನ್ನು ಇಂದಿಗೆ ಕಾಯ್ದಿರಿಸಿದ್ದರು. ಇಂದು ಅಪರಾಧಿ ಬಾಬಾಗೆ 20 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ಬಾಬಾ ದೋಷಿ ಎಂದು ತೀರ್ಪು ನೀಡುತ್ತಿದ್ದಂತೆ ಪಂಚಕುಲದಲ್ಲಿ ಭಾರಿ ಹಿಂಸಾಚಾರ ನಡೆದಿತ್ತು. ಈ ಹಿನ್ನೆಲೆಯಲ್ಲಿ ಇಂದು ಸ್ವತಃ ನ್ಯಾಯಾಧೀಶರೇ ಅಪರಾಧಿ ಇರುವ ರೋಹ್ಟಕ್ ಜೈಲಿಗೆ ಹೆಲಿಕಾಪ್ಟರ್ ಮೂಲಕ ಆಗಮಿಸಿ ಜೈಲಿನಲ್ಲಿಯೇ ವಾದ-ಪ್ರತಿ ವಾದ ಆಲಿಸಿ ಅಂತಿಮ ತೀರ್ಪು ಪ್ರಕಟಿಸಿದ್ದಾರೆ.
ರಾಮ್ ರಹೀಮ್ ಸಿಂಗ್ ಪರ ವಾದ ಮಂಡಿಸಿದ ಎಸ್ ಕೆ ಗಾರ್ಗ್ ಅವರು ಬಾಬಾ ಸಾಮಾಜಿಕ ಸೇವೆ ಮತ್ತು ಜನಾ ಅಭಿವೃದ್ಧಿ ಕಾರ್ಯಗಳನ್ನು ಗುರುತಿಸಿ ಅವರ ಶಿಕ್ಷೆಯ ಪ್ರಮಾಣವನ್ನು ಕಡಿಮೆ ಮಾಡಬೇಕು ಎಂದು ಮನವಿ ಮಾಡಿದರು. ಆದರೆ ಸಿಬಿಐ ಪರ ವಕೀಲರು ಅಪರಾಧಿಗೆ ಜೀವಾವಧಿ ಶಿಕ್ಷೆ ನೀಡಬೇಕು ಎಂದು ಮನವಿ ಮಾಡಿದರು.
ಅತ್ಯಾಚಾರ ಪ್ರಕರಣದ ಕುರಿತಂತೆ ವಾದ ಪ್ರತಿವಾದ ಆಲಿಸಿದ ಬಳಿಕ ನ್ಯಾಯಾಧೀಶರು ತೀರ್ಪು ಓದಲು ಆರಂಭಿಸಿದಾಗ ಡೇರಾ ಮುಖ್ಯಸ್ಥ ರಾಮ್ ರಹೀಮ್ ಸಿಂಗ್ ತನ್ನ ತಪ್ಪನ್ನು ಕ್ಷಮಿಸುವಂತೆ ಹೇಳಿ ಕುಸಿದು ಬಿದ್ದ ಘಟನೆ ನಡೆದಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಜೈಲಿನ ಸುತ್ತ 17 ಸಾವಿರ ಪೊಲೀಸರು ಬಿಗಿ ಭದ್ರತೆಯನ್ನು ಒದಗಿಸಿದ್ದರು.
SCROLL FOR NEXT