ದೇಶ

ರಾಮ್ ರಹೀಮ್ ಸಿಂಗ್ ಅತ್ಯಾಚಾರ ಬಯಲು ಮಾಡಿ ಹತ್ಯೆಯಾದ ಪತ್ರಕರ್ತನ ಪುತ್ರನಿಗೆ ಸಿಗುತ್ತಾ ನ್ಯಾಯ?

Lingaraj Badiger
ಸಿರ್ಸಾ(ಹರಿಯಾಣ): 15 ವರ್ಷಗಳ ಹಿಂದೆ ಸಿರ್ಸಾದಲ್ಲಿರುವ ಡೇರಾ ಸಚ್ಚಾ ಸೌದ ಮುಖ್ಯ ಕಚೇರಿಯಲ್ಲಿ ಸ್ವಯಂ ಘೋಷಿತ ದೇವಮಾನವ ಗುರ್ಮೀತ್‌ ರಾಮ್ ರಹೀಮ್ ಸಿಂಗ್‌ ಇಬ್ಬರು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿರುವುದನ್ನು ಬಯಲು ಮಾಡಿ ಹತ್ಯೆಯಾದ ಪತ್ರಕರ್ತ ರಾಮ್ ಚಂದರ್ ಛತ್ರಪತಿ ಅವರ ಪುತ್ರ ನ್ಯಾಯಕ್ಕಾಗಿ ಏಕಾಂಗಿ ಹೋರಾಟ ನಡೆಸುತ್ತಿದ್ದಾರೆ.
ರಾಮ್ ರಹೀಮ್ ಸಿಂಗ್ ಅತ್ಯಾಚಾರವನ್ನು ಬಯಲು ಮಾಡಿದ ಕೆಲವೇ ತಿಂಗಳಲ್ಲಿ ರಾಮ್ ಚಂದರ್ ಅವರನ್ನು ಅಕ್ಟೋಬರ್ 24ರಂದು ಅವರ ನಿವಾಸದ ಬಳಿಯೇ ಗುಂಡಿಕ್ಕೆ ಹತ್ಯೆ ಮಾಡಲಾಗಿತ್ತು. 
'ನನ್ನ ತಂದೆ ರಾಮ್ ಚಂದರ್ ಅವರು ಪತ್ರಕರ್ತರಾಗುವ ಮುನ್ನ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದರು. ಅವರು ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ. ಆದರೆ ಅವರು ಬರೆದ ವಸ್ತುನಿಷ್ಠ ವರದಿಯನ್ನು ಹಾಗೆಯೇ ಪ್ರಕಟಿಸದೆ ಸಂಪಾದಕರು ಅದನ್ನು ಎಡಿಟ್ ಮಾಡುತ್ತಿದ್ದರಿಂದ ಅವರು ಬೇಸರಗೊಂಡು ಕೆಲಸ ಬಿಟ್ಟಿದ್ದರು. ಬಳಿಕ ತಾವೇ ಪೂರ ಸಚ್ಚ್ ಎಂಬ ಪತ್ರಿಕೆಯನ್ನು ಆರಂಭಿಸಿದ್ದರು. ಅದರಲ್ಲಿ ಬಾಬಾ ರಾಮ್ ರಹೀಮ್ ಸಿಂಗ್ ಅವರ ಅನಾಚಾರವನ್ನು ಬಯಲು ಮಾಡಿದ್ದರು. ಅಲ್ಲದೆ ಈ ಸಂಬಂಧ ಸಂತ್ರಸ್ಥ ಸಾಧ್ವಿಯರು ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಬರೆದ ಪತ್ರವನ್ನು ಪ್ರಕಟಿಸಿದ್ದರು' ಎಂದು ಅನ್ಶುಲ್ ಛತ್ರಪತಿ ಅವರು ತಿಳಿಸಿದ್ದಾರೆ.
'ಆ ಪತ್ರ ಪ್ರಕಟಿಸಿದ ನಂತರ ನನ್ನ ತಂದೆಗೆ ಹಲವು ಬಾರಿ ಬೆದರಿಕೆಗಳು ಬಂದಿವೆ. ಆ ಪತ್ರದ ಆಧಾರದ ಮೇಲೆಯೇ ಹೈಕೋರ್ಟ್ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಪ್ರಕರಣವನ್ನು ಸಿಬಿಐಗೆ ವಹಿಸಿತ್ತು. ಇದಾದ ಬಳಿಕ ಅಕ್ಬೋಬರ್ 24, 2002ರಲ್ಲಿ ನನ್ನ ತಂದೆ ಮೇಲೆ ದಾಳಿ ನಡೆದಿತ್ತು. ಅಂದು ಇಬ್ಬರು ದುಷ್ಕರ್ಮಿಗಳು ನನ್ನ ತಂದೆ ಮೇಲೆ ಐದು ಸುತ್ತು ಗುಂಡು ಹಾರಿಸಿದ್ದರು. ಹಾಗ ನನಗೆ ಕೇವಲ 21 ವರ್ಷ. ಘಟನೆಯ ನಂತರ ಪೊಲೀಸರು ಎಫ್ಐಆರ್ ನಲ್ಲಿ ಡೇರಾ ಮುಖ್ಯಸ್ಥನ ಹೆಸರು ಉಲ್ಲೇಖಿಸದಿರುವುದರಿಂದ ನ್ಯಾಯಕ್ಕಾಗಿ ಎಲ್ಲಿಗೆ ಹೋಗಬೇಕು ಎಂಬುದು ನನಗೆ ತಿಳಿಯಲಿಲ್ಲ' ಎಂದಿದ್ದಾರೆ. ಅಲ್ಲದೆ ಅಂದಿನಿಂದಲೇ ನಾನು ಕಾನೂನು ಹೋರಾಟ ಆರಂಭಿಸಿದೆ ಎಂದು ಹೇಳಿದ್ದಾರೆ.
ಇನ್ನು ಅತ್ಯಾಚಾರ ಪ್ರಕರಣದಲ್ಲಿ ಸಿಬಿಐ ವಿಶೇಷ ಕೋರ್ಟ್ ರಾಮ್ ರಹೀಮ್ ಸಿಂಗ್ ಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿರುವುದು ತಮಗೆ ತೃಪ್ತಿ ತಂದಿದೆ ಎಂದಿರುವ ಅನ್ಶುಲ್ ಅವರು, ಬಾಬಾ ಸಂತರ ಸೋಗಿನಲ್ಲಿರುವ ಒಬ್ಬ ಕ್ರಿಮಿನಲ್. ರಾಮ್ ರಹೀಮ್ ಸಿಂಗ್ ಸಮಾಜಘಾತುಕ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
SCROLL FOR NEXT