ದೇಶ

ಐಆರ್ ಎನ್‌ಎಸ್‌ಎಸ್‌–1ಎಚ್‌ ಉಪಗ್ರಹ ಉಡಾವಣೆಗೆ ಕ್ಷಣಗಣನೆ ಆರಂಭ

Lingaraj Badiger
ಬೆಂಗಳೂರು: ಪ್ರಾದೇಶಿಕ ದಿಕ್ಸೂಚಿ ವ್ಯವಸ್ಥೆಯನ್ನು ಹೊಂದುವುದಕ್ಕಾಗಿ ಇಸ್ರೊದ ಭಾರತೀಯ ಪ್ರಾದೇಶಿಕ ಸಂಚಾರ ನಿರ್ವಹಣಾ ವ್ಯವಸ್ಥೆ ಉಪಗ್ರಹ(ಐಆರ್‌ಎನ್‌ಎಸ್‌ಎಸ್‌) ಸರಣಿಯ ಎಂಟನೇ ಉಪಗ್ರಹ ಗುರುವಾರ ಉಡಾವಣೆಗೊಳ್ಳಲಿದೆ.
ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ನಾಳೆ ಸಂಜೆ 7ಕ್ಕೆ ಐಆರ್‌ಎನ್‌ಎಸ್‌ಎಸ್‌–1ಎಚ್‌ ಉಪಗ್ರಹವನ್ನು ಪಿಎಸ್‌ಎಲ್‌ವಿ- ಸಿ39 ಉಡಾವಣಾ ನೌಕೆಯ ಮೂಲಕ ಉಡಾವಣೆ ಮಾಡುವುದಾಗಿ ಇಸ್ರೊ ತಿಳಿಸಿದೆ.
ಐಆರ್‌ಎನ್‌ಎಸ್‌ಎಸ್‌–1ಎ ಉಪಗ್ರಹದ ಅಟಾಮಿಕ್‌ ಕ್ಲಾಕ್‌ ವಿಫಲಗೊಂಡಿರುವುದರಿಂದ ಪ್ರಾದೇಶಿಕ ಮಾರ್ಗದರ್ಶನದ ನಿಖರ ಮಾಹಿತಿ ರವಾನೆಯಾಗುವುದಿಲ್ಲ. ಆದರ ಬದಲಾಗಿ ಉಡಾವಣೆಗೊಳ್ಳಲಿರುವ ಐಆರ್‌ಎನ್‌ಎಸ್‌ಎಸ್‌ ಸರಣಿಯ ಎಂಟನೇ ಉಪಗ್ರಹ  ಕಾರ್ಯನಿರ್ವಹಿಸಲಿದೆ.
ಅಮೆರಿಕ ಮೂಲಕ ಜಿಪಿಎಸ್‌ ರೀತಿಯಲ್ಲಿಯೇ ಭಾರತೀಯ ಪ್ರಾದೇಶಿಕ ಮಾರ್ಗದರ್ಶಿ ಉಪಗ್ರಹ ವ್ಯವಸ್ಥೆ ಸಮುದ್ರಯಾನ, ವಾಯುಯಾನ, ಸಾರಿಗೆ ಸಂಪರ್ಕ ನಿಯಂತ್ರಣ ಮತ್ತಿತರ ಕಾರ್ಯಗಳಿಗೆ ನೆರವಾಗಲಿದೆ.
1,420 ಕೋಟಿ ವೆಚ್ಚದ ಭಾರತೀಯ ಪ್ರಾದೇಶಿಕ ಮಾರ್ಗದರ್ಶಿ ಉಪಗ್ರಹ ವ್ಯವಸ್ಥೆ ಒಟ್ಟು ಒಂಬತ್ತು ಉಪಗ್ರಹಗಳನ್ನು ಒಳಗೊಂಡಿರಲಿದೆ. ರೈಲುಗಳ ಸಂಚಾರ, ವಾಹನಗಳ ನಿಯಂತ್ರಣ, ಮೀನುಗಾರರಿಗೆ ಗಡಿ ಭಾಗ ದಾಟದಂತೆ ಎಚ್ಚರಿಕೆ ರವಾನಿಸುವುದು ಸೇರಿದಂತೆ ಬಹು ವಲಯಗಳಲ್ಲಿ ಉಪಯೋಗವಾಗಲಿದೆ.
SCROLL FOR NEXT