ಕುಸಿದುಬಿದ್ದ ಕಟ್ಟಡದ ಅವಶೇಷಗಳು
ಮುಂಬೈ: ಭಾರಿ ಮಳೆಯಿಂದಾಗಿ ಕಂಗಾಲಾಗಿರುವ ವಾಣಿಜ್ಯ ನಗರಿ ಮುಂಬೈನಲ್ಲಿ ಗುರುವಾರ ಮತ್ತೊಂದು ಅವಘಡ ಸಂಭವಿಸಿದ್ದು, ದಕ್ಷಿಣ ಮುಂಬೈನ ಭೇಂಡಿ ಬಜಾರ್ ನಲ್ಲಿ ಐದು ಅಂತಸ್ತಿನ ವಸತಿ ಕಟ್ಟಡವೊಂದು ಕುಸಿದುಬಿದ್ದ ಪರಿಣಾಮ ಕನಿಷ್ಠ 19 ಮಂದಿ ಮೃತಪಟ್ಟಿದ್ದಾರೆ ಮತ್ತು ಇಬ್ಬರು ಅಗ್ನಿ ಶಾಮಕ ಸಿಬ್ಬಂದಿ ಸೇರಿದಂತೆ 12 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೆ ಇನ್ನು 30ಕ್ಕೂ ಹೆಚ್ಚು ಮಂದಿ ಕಟ್ಟಡದ ಅವಶೇಷಗಳಡಿ ಸಿಲುಕಿರುವ ಸಾಧ್ಯತೆ ಇದೆ ಎಂದಿದ್ದಾರೆ.
ಮುಂಬೈನ ಡೋಂಗ್ರಿ ಪ್ರದೇಶದ ಭೇಂಡಿ ಬಜಾರ್ ನಲ್ಲಿರುವ ವಸತಿ ಪ್ರದೇಶದ ಮೂರು ಅಂತಸ್ತಿನ ಕಟ್ಟಡ ಇಂದು ಬೆಳಗ್ಗೆ ಕುಸಿದಿದ್ದು, ಕಟ್ಟಡದಲ್ಲಿ 9ಕ್ಕೂ ಹೆಚ್ಚು ಕುಟುಂಬ ವಾಸಿಸುತ್ತಿದ್ದವು ಎಂದು ಅಗ್ನಿ ಶಾಮಕ ಸಿಬ್ಬಂದಿ ತಿಳಿಸಿದ್ದಾರೆ.
ಜೆಜೆ ಆಸ್ಪತ್ರೆಯ ಸಮೀಪ ಮುಸ್ಲಿಮರು ಹೆಚ್ಚಾಗಿ ವಾಸಿಸುವ ಪಕ್ಮೋಡಿಯಾ ರಸ್ತೆಯಲ್ಲಿ ಈ ಕಟ್ಟಡ ಇದ್ದು, ಇದರಲ್ಲಿ ಮಧ್ಯಮ ವರ್ಗದ ಕುಟುಂಬಗಳು ವಾಸಿಸುತ್ತಿದ್ದವು ಮತ್ತು ಕೆಳ ಮಹಡಿಯಲ್ಲಿ ಆರು ಗೋದಾಮುಗಳಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಸುಮಾರು 100 ವರ್ಷ ಹಳೆಯದಾದ ಈ ಕಟ್ಟಡ ಮಳೆಯಿಂದಾಗಿ ಕುಸಿದು ಬಿದ್ದಿದೆಯೇ ಅಥವಾ ಕಳಪೆ ಕಾಮಗಾರಿಯಿಂದಾಗಿ ಕುಸಿದು ಬಿದ್ದಿದೆಯೋ ಎಂಬುದು ಇನ್ನು ಸ್ಪಷ್ಟವಾಗಿಲ್ಲ.
ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಈವರೆಗೆ ರಕ್ಷಣಾ ಸಿಬ್ಬಂದಿ 11 ಮಂದಿಯನ್ನು ರಕ್ಷಿಸಿದ್ದಾರೆ ಎಂದು ತಿಳಿದುಬಂದಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos