ತಿರುನೆಲ್ವೇಲಿ: ಪ್ಯಾಡ್ ಅಸಮರ್ಪಕ ಬಳಕೆಯಿಂದಾಗಿ ಬೆಂಚಟ್ ಮೇಲೆ ಮುಟ್ಟಿನ ಕಲೆಯಾಗಿತ್ತೆಂಬ ಕಾರಣಕ್ಕೆ ಶಿಕ್ಷಕಿಯೊಬ್ಬಳು ಬಾಲಕಿಗೆ ತರಗತಿಯಲ್ಲಿಯೇ ಮುಜುಗರಕ್ಕೀಡು ಮಾಡಿದ ಕಾರಣಕ್ಕೆ ತೀವ್ರವಾಗಿ ನೊಂದ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ತಮಿಳಾಡಿನ ತಿರುನೆಲ್ವೇಲಿಯಲ್ಲಿ ನಡೆದಿದೆ.
12 ವರ್ಷದ ವಿದ್ಯಾರ್ಥಿನಿಯೊಬ್ಬಳು 7 ತರಗತಿಯಲ್ಲಿ ಓದುತ್ತಿದ್ದು, ಮನೆಯ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಆತ್ಮಹತ್ಯೆಗೂ ಮುನ್ನ ಬಾಲಕಿ ಪತ್ರವನ್ನು ಬರೆದಿದ್ದು, ಶಿಕ್ಷಕಿಯ ಹೆಸರನ್ನು ಹೇಳದೆಯೇ ಪತ್ರದಲ್ಲಿ ಆತ್ಮಹತ್ಯೆಗೆ ಕಾರಣವೇನು ಎಂಬುದನ್ನು ತಿಳಿಸಿದ್ದಾಳೆ. ಮುಟ್ಟಿನ ಸಮಸ್ಯೆಯಿಂದಾಗಿ ವಿದ್ಯಾರ್ಥಿನಿಯ ಬಟ್ಟೆಯ ಮೇಲೆ ರಕ್ತದ ಕಲೆ ಕಾಣಿಸಿಕೊಂಡಿದೆ. ಬೆಂಚ್ ಮೇಲೆಯೂ ರಕ್ತದ ಕಲೆ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಕೆಲ ಸಹಪಾಠಿಗಳು ಆಕೆಗೆ ಮಾಹಿತಿ ನೀಡಿದ್ದಾರೆ.
ಈ ವೇಲೆ ಬಾಲಕಿ ಶೌಚಾಲಯಕ್ಕೆ ತೆರಳಲು ಶಿಕ್ಷಕಿಯ ಅನುಮತಿ ಕೇಳಿದ್ದಾರೆ, ಆದರೆ, ತಾನೂ ಒಬ್ಬ ಮಹಿಳೆಯಾಗಿದ್ದರೂ ಬಾಲಕಿ ನೋವನ್ನು ಅರಿಯದ ಶಿಕ್ಷಕಿ ತುಂಬಿದ ತರಗತಿಯಲ್ಲಿ ಪ್ಯಾಡ್ ಬಳಕೆ ಬಗ್ಗೆ ಹೇಳಿ ಗದರಿದ್ದಾಳೆ. ನಂತರ ಶಾಲೆಯ ಪ್ರಾಂಶುಪಾಲರಿಗೆ ವಿಷಯ ಹೋಗಿ ಅವರೂ ಕೂಡ ವಿದ್ಯಾರ್ಥಿನಿಗೆ ಮುಜುಗರವಾಗುವಂತೆ ಹೀಯಾಳಿಸಿದ್ದಾರೆ. ಇದರಿಂದ ತೀವ್ರವಾಗಿ ನೊದ ವಿದ್ಯಾರ್ಥಿನಿ ಮನೆಗೆ ತೆರಳಿ ಆತ್ಮಹತ್ಯೆಗೆ ಶರಣಾಗಿದ್ದಾಳೆಂದು ತಿಳಿದುಬಂದಿದೆ.
ವಿದ್ಯಾರ್ಥಿನಿ ಆತ್ಮಹತ್ಯೆಗೂ ಮುನ್ನ ಗೆಳತಿಯೊಬ್ಬಳ ಬಳಿ ತನ್ನ ನೋವನ್ನು ಹೇಳಿಕೊಂಡಿದ್ದು, 6ನೇ ತರಗತಿಯಲ್ಲಿದ್ದಾಗ ಶಿಕ್ಷಕಿ ನನ್ನ ಬಗ್ಗೆ ಏನಾದರೂ ಸಮಸ್ಯೆಗಳನ್ನು ಹೇಳಿದ್ದರೇ? 7ನೇ ತರಗತಿಯ ಶಿಕ್ಷಕಿ ಏಕೆ ನನ್ನ ಮೇಲೆ ದೂರುಗಳನ್ನು ಹೇಳುತ್ತಿದ್ದಾರೆ? ನನಗೆ ಬೇರಾವುದೇ ಆಯ್ಕೆಗಳಿಲ್ಲ, ನಾನು ಸಾಯಬೇಕು ಎಂದು ಹೇಳಿಕೊಂಡಿದ್ದಾಳೆ.
ಪ್ರಕರಣಕ್ಕೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಕಳೆದ ಗುರುವಾರ ಶಾಲೆಯಲ್ಲಿ ಬಾಲಕಿಗೆ ಅವಮಾನ ಮಾಡಲಾಗಿದೆ. ತರಗತಿಯಲ್ಲಿ ಮುಟ್ಟಿನ ಸಮಸ್ಯೆ ಎದುರಾದಾಗ ಬಾಲಕಿಯನ್ನು ಗದರಿರುವ ಶಿಕ್ಷಕಿ ಆಕೆಯನ್ನು ತರಗತಿಯಿಂದ ಹೊರಗೆ ಹಾಕಿದ್ದಾರೆ. ಶಾಲಾ ಆಡಳಿತ ಮಂಡಳಿ ಕೂಡ ಆಕೆಗೆ ಪ್ಯಾಡ್ ನ್ನು ನೀಡಿಲ್ಲ. ತುಂಡು ಬಟ್ಟೆಯನ್ನು ನೀಡಿದೆ. ಶಿಕ್ಷಕಿಯ ಬೈಗುಳದಿಂದ ಬಾಲಕಿ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಹೇಳಿಕೊಂಡಿದೆ.
ಪ್ರಸ್ತುತ ಶಿಕ್ಷಕಿಯ ವಿರುದ್ದ ಐಪಿಸಿ ಸೆಕ್ಷನ್ 306 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos