ದೇಶ

ಮುಂಬೈ ಕಟ್ಟಡ ಕುಸಿತ ಪ್ರಕರಣ: ಸಾವಿನ ಸಂಖ್ಯೆ 34ಕ್ಕೆ ಏರಿಕೆ!

Srinivasamurthy VN

ಮುಂಬೈ: ಮುಂಬೈನ ಭೇಂಡಿ ಜನವಸತಿ ಪ್ರದೇಶದಲ್ಲಿ ಗುರುವಾರ 117 ವರ್ಷದ ಹಳೆಯ ಐದು ಅಂತಸ್ತಿನ ಕಟ್ಟಡ ಕುಸಿತದಿಂದಾಗಿ ಮೃತರ ಸಂಖ್ಯೆ 34ಕ್ಕೆ ಏರಿಕೆಯಾಗಿದ್ದು ಕಟ್ಟಡದ ಅವಶೇಗಳಡಿಯಲ್ಲಿ ಇನ್ನೂ ಹಲವರು  ಸಿಲುಕಿರುವ ಶಂಕೆ ಮೇರೆಗೆ ರಕ್ಷಣಾ ಕಾರ್ಯಾಚರಣೆ ಮುಂದುವರೆಸಲಾಗಿದೆ.

ಮುಂಬೈನಲ್ಲಿ ಸತತ ಮಳೆ ಸುರಿಯುತ್ತಿರುವ ಪರಿಣಾಮವಾಗಿ ಇಲ್ಲಿನ ಡೋಂಗ್ರಿ ಪ್ರದೇಶದ ಭೇಂಡಿ ಬಜಾರ್‌ ನಲ್ಲಿನ 117 ವರ್ಷದ  ಹಳೆಯ ಐದು ಅಂತಸ್ತಿನ ಕಟ್ಟಡ ಗುರುವಾರ ಬೆಳಗ್ಗೆ ಕುಸಿದಿತ್ತು. ಪರಿಣಾಮ 34 ಮಂದಿ  ಸಾವನ್ನಪ್ಪಿದ್ದು, 14 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮೂಲಗಳ ಪ್ರಕಾರ ಮೃತರಲ್ಲಿ 9 ಮಹಿಳೆಯರು, ಒಂದು ಮಗು ಹಾಗೂ 24 ಜನ ಪುರುಷರು ಸೇರಿದ್ದಾರೆ ಎನ್ನಲಾಗಿದೆ. ಕಟ್ಟಡದ ಅವಶೇಷಗಳಲ್ಲಿ ಇನ್ನೂ ಹಲವರು ಸಿಲುಕಿರುವ ಶಂಕೆ ಇದ್ದು, 2ನೇ ದಿನಕ್ಕೆ ರಕ್ಷಣಾ ಕಾರ್ಯಾಚರಣೆ  ಮುಂದುವರೆಸಲಾಗಿದೆ. ಸ್ಥಳೀಯರು ತಿಳಿಸಿರುವಂತೆ ಕುಸಿದಿರುವ ಕಟ್ಟಡದಲ್ಲಿ 25ಕ್ಕೂ ಅಧಿಕ ಕುಟುಂಬಗಳು ನೆಲೆಸಿದ್ದವು ಎಂದು ಹೇಳಲಾಗಿದೆ.  

ಪರಿಹಾರ ಘೋಷಿಸಿದ ಸಿಎಂ ಫಡ್ನವಿಸ್
ಇದೇ ವೇಳೆ ಈ ಘಟನೆ ಬಗ್ಗೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌‌ ಅವರು ತನಿಖೆಗೆ ಆದೇಶಿಸಿದ್ದು, ಮೃತರ ಕುಟುಂಬಗಳಿಗೆ ತಲಾ 5ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ. ಇದೇ ವೇಳೆ ಘಟನೆ ಕುರಿತಂತೆ  ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಸಂತಾಪ ವ್ಯಕ್ತ ಪಡಿಸಿದ್ದು, ಘಟನೆ ತೀವ್ರ ನೋವು ತಂದಿದೆ ಎಂದು ಹೇಳಿದ್ದಾರೆ.

SCROLL FOR NEXT