ಕಾಲಿವುಡ್ ನಟ ವಿಶಾಲ್ ತಮಿಳಿನಾಡಿನ ಆರ್ ಕೆ ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆ ಇದೆ.
ಚಿತ್ರರಂಗದಲ್ಲಿರುವ ಭ್ರಷ್ಟಾಚಾರವನ್ನು ಹಾಗೂ ಸಿನಿಮಾದಲ್ಲಿ ರಾಜಕಾರಣಿಗಳು ಹಸ್ತಕ್ಷೇಪ ಮಾಡುವುದನ್ನು ವಿರೋಧಿಸುವ ನಟ ವಿಶಾಲ್, ಸೋಮವಾರ ನಾಮಪತ್ರ ಸಲ್ಲಿಕೆ ಮಾಡುವ ಸಾಧ್ಯತೆ ಇದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಇತ್ತೀಚೆಗಷ್ಟೇ ಬಿಡುಗಡೆಯಾದ ಮೆರ್ಸಲ್ ಚಿತ್ರದ ಪೈರೆಟೆಡ್ ಆವೃತ್ತಿಯನ್ನು ವೀಕ್ಷಿಸಿದ್ದ ಬಿಜೆಪಿ ನಾಯಕ ಹೆಚ್ ರಾಜ ಅವರ ಕ್ರಮವನ್ನು ವಿಶಾಲ್ ತೀವ್ರವಾಗಿ ಖಂಡಿಸಿದ್ದರು.
ತಮಿಳುನಾಡು ಮಾಜಿ ಸಿಎಂ ಜಯಲಲಿತಾ ನಿಧನದಿಂದಾಗಿ ತೆರವುಗೊಂಡಿದ್ದ ಆರ್ ಕೆ ನಗರ ವಿಧಾನಸಭೆಗೆ ಡಿ.21 ರಂದು ಉಪಚುನಾವಣೆ ನಡೆಯಲಿದ್ದು, ಈಗಾಗಲೇ ಎಐಎಡಿಎಂಕೆ ಇ ಮಧುಸೂಧನ್ ಅವರನ್ನು ಕಣಕ್ಕಿಳಿಸಿದ್ದರೆ ಡಿಎಂಕೆ ಮರುಧು ಗಣೇಶ್ ಅವರನ್ನು ಕಣಕ್ಕಿಳಿಸಿದೆ. ಇದೇ ವೇಳೆ ಎಐಎಡಿಎಂಕೆಯ ಬಂಡಾಯ ನಾಯಕ ಟಿಟಿವಿ ದಿನಕರನ್ ಸಹ ನಾಮಪತ್ರ ಸಲ್ಲಿಸಿದ್ದಾರೆ. ಇನ್ನು ಬಿಜೆಪಿಯಿಂದ ಕರು ನಾಗರಾಜನ್ ಹಾಗೂ ಜಯಲಲಿತಾ ಸೋದರ ಸಂಬಂಧಿ ದೀಪಾ ಜಯಕುಮಾರ್ ಸಹ ಉಪಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ.