ಮೆಹ್ಸಾನ: ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಪಾಟಿದಾರ್ ಪ್ರತಿಭಟನೆ ಸವಾಲಿನ ಸಂಗತಿಯಾಗಿದ್ದು, ಪಾಟಿದಾರ್ ಸಮುದಾಯದ ಜನತೆಯ ಆಕ್ರೋಶ ಇರುವುದು ಬಿಜೆಪಿಯ ಮೇಲೆ ಬದಲಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಮೇಲಲ್ಲ ಎಂಬುದು ಬಹಿರಂಗವಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ತವರು ಜಿಲ್ಲೆಯಾಗಿರುವ ಮೆಹ್ಸಾನದಲ್ಲಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಅಭಿಪ್ರಾಯ ಸಂಗ್ರಹಿಸಿದೆ. 2015 ರ ಪಾಟಿದಾರ್ ಪ್ರತಿಭಟನೆಯಲ್ಲಿ ಮೃತಪಟ್ಟಿದ್ದ ಎಂಬಿಎ ವಿದ್ಯಾರ್ಥಿ ಮಯೂರ್ ಪಟೆಲ್ ಅವರ ಅಜ್ಜ ಮನ್ ಭಾಯ್ ಪಟೆಲ್ ಶಂಭುದಾಸ್ ಅವರು ಮಾತನಾಡಿದ್ದು ಅಂದಿನ ಘಟನೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ಇಂದಿಗೂ ಸಹ ಪ್ರತಿಕ್ರಿಯೆ ಬಯಸುತ್ತಿರುವುದಾಗಿ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ನಿಮಗೆ ಕೋಪವಿದೆಯೇ ಎಂಬ ಪ್ರಶ್ನೆಗೆ ನಸುನಗುತ್ತ ಉತ್ತರಿಸಿರುವ ಅವರು "ಮೋದಿಜಿ ಬಗ್ಗೆ ನಮಗೆ ಕೋಪವಿಲ್ಲ, ಆದರೆ ಅವರು ಉತ್ತರ ನೀಡಲೇಬೇಕಾಗುತ್ತದೆ, ಮಯೂರ್ ಹಾಲು ತರಲು ಹೋಗಿದ್ದಾಗ ಅವನ ಮೇಲೆ ಗುಂಡು ಹಾರಿಸಿದ್ದಾರೆ. ಮಯೂರ್ ಹಾಗೂ ಇನ್ನಿತರರ ಮೇಲೆ ಯಾರ ಆದೇಶದ ಪ್ರಕಾರ ಪೊಲೀಸರು ಗುಂಡು ಹಾರಿಸಿದ್ದರು, ಎಂದು ಮನ್ ಭಾಯ್ ಪಟೇಲ್ ಪ್ರಶ್ನಿಸಿದ್ದಾರೆ.
"ಗುಜರಾತ್ ನಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರುವ ಸಾಧ್ಯತೆ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, ಬಿಜೆಪಿ ಬಗ್ಗೆ ಎಲ್ಲಾ ಗುಜರಾತಿಗಳಿಗೂ ಕೋಪವಿದೆ, ಶಿಕ್ಷಣ, ಉದ್ಯೋಗ ಸೇರಿದಂತೆ ಜನತೆ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಒಂದು ವೇಳೆ ಇದನ್ನು ಪ್ರಶ್ನಿಸಿ ಪ್ರತಿಭಟನೆ ನಡೆಸಿದರೆ ಬಿಜೆಪಿಯವರು ಗುಂಡು ಹಾರಿಸುತ್ತಾರೆ. ಬಿಜೆಪಿಯವರು ಅಭಿವೃದ್ಧಿ ಬಗ್ಗೆ ಮಾತನಾಡುತ್ತಾರೆ, ಜನರನ್ನು ಹತ್ಯೆ ಮಾಡುವುದು ಅಭಿವೃದ್ಧಿಯೇ ಎಂದು ಪ್ರಶ್ನಿಸಿದ್ದಾರೆ.
ಇದೇ ವೇಳೆ ಹಾರ್ದಿಕ್ ಪಟೇಲ್ ಬಗ್ಗೆ ಮನ್ ಭಾಯ್ ಪಟೆಲ್ ಶಂಭುದಾಸ್ ವಿಶ್ವಾಸ ವ್ಯಕ್ತಪಡಿಸಿದ್ದು, ಆತ ಒಳ್ಳೆಯ ವ್ಯಕ್ತಿ ಬಿಜೆಪಿ ರೀತಿಯಲ್ಲಿ ಸುಳ್ಳು ಹೇಳುವುದಿಲ್ಲ. ಯಾರನ್ನೇ ಕೇಳಿ ಹಾರ್ದಿಕ್ ಪಟೇಲ್ ಬಗ್ಗೆ ಇದನ್ನೇ ಹೇಳುತ್ತಾರೆ ಎಂದಿದ್ದಾರೆ.