ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಕ್ಷಮೆ ಕೇಳಬೇಕೆಂದು ಹೇಳುವ ಮುನ್ನ ಕಾಂಗ್ರೆಸ್ ಮತ್ತು ಮಾಜಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಭಯೋತ್ಪಾದನೆ ಬಗ್ಗೆ ರಾಷ್ಟ್ರೀಯ ನೀತಿಗಳನ್ನು "ಉಲ್ಲಂಘಿಸಿದ್ದಕ್ಕಾಗಿ" ಕ್ಷಮೆ ಯಾಚಿಸಬೇಕು ಮತ್ತು ಮಣಿ ಶಂಕರ್ ಅಯ್ಯರ್ ಅವರ ಮನೆಯಲ್ಲಿ ನಡೆದ ಸಭೆಯ ವಿಚಾರಕ್ಕೆ ಸಂಬಂಧಿಸಿದಂತೆ ವಿವರಗಳನ್ನು ಬಹಿರಂಗಪಡಿಸಬೇಕು ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಆಗ್ರಹಿಸಿದರು..
ಮೋದಿ ಅವರ ಮೇಲೆ ಕಾಂಗ್ರೆಸ್ ಮುಗಿಬಿದ್ದದ್ದಕ್ಕೆ ತೀವ್ರವಾಗಿ ಪ್ರತಿಕ್ರಿಯಿಸಿದ ಜೇಟ್ಲಿ, ಭಾರತದಲ್ಲಿ ಭಯೋತ್ಪಾದನೆ ಚಟುವಟಿಕೆಯನ್ನು ಸ್ತಬ್ದಗೊಳಿಸುವ ತನಕ ಪಾಕಿಸ್ತಾನದೊಂದಿಗೆ ಯಾವುದೇ ಮಾತುಕತೆ ನಡೆಯಬಾರದು ಎಂದು ರಾಷ್ಟ್ರೀಯ ನೀತಿಯನ್ನು ಹೊಂದಿರುವಾಗ, ದೇಶದ ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್ ಅದನ್ನು ಉಲ್ಲಂಘಿಸಿದೆ.
"ಆದರೆ ಕಾಂಗ್ರೆಸ್ ನಲ್ಲಿರುವ ಮಣಿ ಶಂಕರ್ ಅಯ್ಯರ್ ಅವರಂತಹ ಜನರು ತಮ್ಮ ಸ್ಥಾನಕ್ಕೆ ಎಂದಿಗೂ ಗೌರವ ತರುವುದಿಲ್ಲ. ಪಾಕಿಸ್ತಾನವು ನಮ್ಮ ದೇಶದಲ್ಲಿ ಭಯೋತ್ಪಾದನೆಯನ್ನು ಪ್ರಾಯೋಜಿಸುವುದಕ್ಕೆ ಮುಂದಾದರೂ ಸಹ ನಾವು ನಮ್ಮ ಸ್ನೇಹವನ್ನು ಮುಂದುವರಿಸುತ್ತೇವೆ ಎನ್ನುವುದು ಅವರ ನಿಲುವು" ಮಾದ್ಯಮಗಳೊಡನೆ ಮಾತನಾಡುತ್ತಾ ಜೇಟ್ಲಿ ನುಡಿದರು. ಅಯ್ಯರ್ ನಂತಹವರ ಜನರ ನೀತಿಯನ್ನು ದೇಶ ಎಂದಿಗೂ ಒಪ್ಪಿಕೊಳ್ಳುವುದಿಲ್ಲ ಎಂದು ಹಣಕಾಸು ಸಚಿವರು ಹೇಳಿದರು.