ದೇಶ

ಅಕ್ರಮ ಗಣಿಗಾರಿಕೆಗೆ ಅನುಮತಿ: ಜಯಂತಿ ನಟರಾಜನ್ ವಿರುದ್ಧ ಸಿಬಿಐ ತನಿಖೆಗೆ ಐಟಿ ಸಾಥ್

Lingaraj Badiger
ಚೆನ್ನೈ: ನಿಯಮಗಳನ್ನು ಉಲ್ಲಂಘಿಸಿ ಅರಣ್ಯ ಭೂಮಿಯಲ್ಲಿ ಗಣಿಗಾರಿಕೆ ನಡೆಸಲು ಅನುಮತಿ ನೀಡಿದ ಆರೋಪ ಎದುರಿಸುತ್ತಿರುವ ಮಾಜಿ ಸಚಿವ ಜಯಂತಿ ನಟರಾಜನ್ ಅವರ ವಿರುದ್ಧದ ಸಿಬಿಐ ತನಿಖೆಯಲ್ಲಿ ಈಗ ಆದಾಯ ತೆರಿಗೆ ಇಲಾಖೆ ಸಹ ಭಾಗಿಯಾಗುತ್ತಿದೆ.
ಯುಪಿಎ ಸರ್ಕಾರದ ಅವಧಿಯಲ್ಲಿ ಪರಿಸರ ಖಾತೆ ಸಚಿವರಾಗಿದ್ದ ಜಯಂತಿ ನಟರಾಜನ್ ವಿರುದ್ಧ ಎಫ್ ಐಆರ್ ದಾಖಲಿಸಿರುವ ಸಿಬಿಐ, ಅವರ ನಿವಾಸದಲ್ಲಿ ಶೋಧ ಕಾರ್ಯ ನಡೆಸಿದೆ. ಶೋಧ ಕಾರ್ಯಕ್ಕೆ ಆದಾಯ ತೆರಿಗೆ ಇಲಾಖೆ ಮಹಾ ನಿರ್ದೇಶಕರ ತಂಡ ಸಹ ಸೇರಿಕೊಂಡಿದೆ ಎಂದು ಐಟಿ ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಇತ್ತೀಚಿಗಷ್ಟೇ ತಮಿಳುನಾಡಿನ ಜಯಂತಿ ನಟರಾಜನ್ ಅವರ ನಿವಾಸದ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದು, ಅವರ ವಿರುದ್ಧ ಕ್ರಿಮಿನಲ್ ಪಿತೂರಿ ಮತ್ತು ಅಧಿಕೃತ ಸ್ಥಾನದ ದುರ್ಬಳಕೆ ಆರೋಪದಡಿ ಸೆಕ್ಷನ್ 120ಬಿ ಅಡಿಯಲ್ಲಿ ಎಫ್ಐಆರ್ ದಾಖಲಿಸಿದೆ. 
ಜಯಂತಿ ನಟರಾಜನ್ ಅಧಿಕಾರವಧಿಯಲ್ಲಿ ಜಾರ್ಖಂಡ್ ನ ಅರಣ್ಯ ಭೂಮಿಯ ಕೆಲ ಭಾಗಗಳಲ್ಲಿ ಜಿಂದಾಲ್ ಸ್ಟೀಲ್ ಮತ್ತು ಪವರ್ ಲಿಮಿಟೆಡ್ ಹಾಗೂ ಜೆಎಸ್ ಡಬ್ಲ್ಯೂ ಸ್ಟೀಲ್ ಲಿಮಿಟೆಡ್ ಕಂಪನಿಗಳು ಅಕ್ರಮ ಗಣಿಗಾರಿಕೆ ನಡೆಸಿದ್ದವು. ಈ ಸಂಬಂಧ ಜಯಂತಿ ಅವರು ಅರಣ್ಯ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಲು ಸಾಥ್ ನೀಡಿದ್ದರು ಎಂಬ ಆರೋಪ ಕೇಳಿಬಂದಿತ್ತು.
SCROLL FOR NEXT