ಲಖನೌ: 2013ರ ಮುಜಾಫರ್ ನಗರ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಸ್ಥಳೀಯ ಕೋರ್ಟ್ ಸಚಿವ ಸುರೇಶ್ ರಾಣಾ, ಮಾಜಿ ಕೇಂದ್ರ ಸಚಿವ ಸಂಜೀವ್ ಬಲ್ಯಾನ್ ಸೇರಿದಂತೆ ಹಲವು ಬಿಜೆಪಿ ಶಾಸಕರ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿ ಮಾಡಿದೆ.
2013ರಲ್ಲಿ ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದ ಈ ಗಲಭೆ ಪ್ರಕರಣದಲ್ಲಿ ಬರೊಬ್ಬರಿ 60 ಮಂದಿ ಸಾವನ್ನಪ್ಪಿದ್ದರು. ಅಂತೆಯೇ 40 ಸಾವಿರ ಜನರು ತಮ್ಮ ಮನೆ-ಮಟ ತೊರೆದು ನಿರಾಶ್ರಿತರಾಗುವಂತೆ ಆಗಿತ್ತು. ಈ ಪ್ರಕರಣದ ತನಿಖೆಗಾಗಿ ಅಂದು ಉತ್ತರ ಪ್ರದೇಶ ಸರ್ಕಾರ ವಿಶೇಷ ತನಿಖಾ ತಂಡವನ್ನು ರಚನೆ ಮಾಡಿತ್ತು. ಅದರಂತೆ ತನಿಖೆ ನಡೆಸಿದ್ದ ಎಸ್ ಐಟಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಿತ್ತು. ಈ ವೇಳೆ ಹಾಲಿ ಸಚಿವ ಸುರೇಶ್ ರಾಣಾ, ಮಾಜಿ ಕೇಂದ್ರ ಸಚಿವ ಸಂಜೀವ್ ಬಲ್ಯಾನ್, ಹಾಲಿ ಬಿಜೆಪಿ ಶಾಸಕರಾದ ಸಂಗೀತ್ ಸೋಮ್ ಮತ್ತು ಉಮೇಶ್ ಮಲ್ಲಿಕ್ ಸೇರಿ ಹಲವರು ಈ ಗಲಭೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಿತ್ತು.
ಇದೀಗ ಪ್ರಕರಣದ ವಿಚಾರಣೆ ನಡೆಸಿದ ಹೆಚ್ಚುವರಿ ಮುಖ್ಯ ನ್ಯಾಯಾಧೀಶರಾದ ಮಧು ಗುಪ್ತಾ ಅವರು, ಪ್ರಕರಣದ ಪ್ರಮುಖ ಆರೋಪಿಗಳಿಗೆ ಜಾಮೀನು ರಹಿತ ವಾರಂಟ್ ಜಾರಿ ಮಾಡಿದೆ. ಅಂತೆಯೇ ಪ್ರಸ್ತುತ ವಾರಂಟ್ ಜಾರಿ ಮಾಡಿರುವ ಎಲ್ಲ ಆರೋಪಿಗಳು ಮುಂಬರುವ ಜನವರಿ 19ರಂದು ನಡೆಯುವ ವಿಚಾರಣೆಗೆ ನ್ಯಾಯಾಲಯಕ್ಕೆ ಖುದ್ಧು ಹಾಜರಾಗುವಂತೆ ಆದೇಶ ನೀಡಿದೆ. ಅಲ್ಲದೆ ಆರೋಪಿಗಳನ್ನು ಕರೆತರುವಂತೆ ಎಸ್ ಐಟಿಗೆ ನಿರ್ದೇಶನ ನೀಡಿದೆ.
ಎಸ್ ಐಟಿ ಸಲ್ಲಿಕೆ ಮಾಡಿರುವ ಚಾರ್ಜ್ ಶೀಟ್ ನಲ್ಲಿ ಬಿಜೆಪಿ ಮುಖಂಡರು ತಮ್ಮ ಭಾಷಣಗಳಲ್ಲಿ ಪ್ರಚೋದನಕಾರಿ ಅಂಶಗಳನ್ನು ಹೇಳುವ ಮೂಲಕ ಗಲಭೆಗೆ ಕುಮ್ಮಕ್ಕು ನೀಡಿದ್ದರು ಎಂದು ಆರೋಪಿಸಲಾಗಿದೆ. ಅದರಂತೆ ಆರೋಪಿಗಳ ವಿರುದ್ಧ ಎಸ್ ಐಟಿ ಐಪಿಸಿ 153ಎ ಪ್ರಕರಣದಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದೆ.