ಅಹಮದಾಬಾದ್: ಗುಜರಾತ್ ಚುನಾವಣೆಯಲ್ಲಿ ಮತಯಂತ್ರಗಳು ತಿರುಚಲು ಬಿಜೆಪಿ ಪಕ್ಷ 140 ಎಂಜಿನಿಯರ್ ಗಳ ನೇಮಕ ಮಾಡಿದೆ ಎಂದು ಪಾಟಿದಾರ್ ಹೋರಾಟದ ಮುಖಂಡ ಹಾರ್ದಿಕ್ ಪಟೇಲ್ ಆರೋಪಿಸಿದ್ದಾರೆ.
ಗುಜರಾತ್ ಮತ್ತು ಹಿಮಾಚಲ ಪ್ರದೇಶ ಚುನಾವಣಾ ಫಲಿತಾಂಶ ಪ್ರಕಟವಾಗಲು ಕೆಲವೇ ಗಂಟೆಗಳು ಬಾಕಿ ಇರುವಂತೆಯೇ ಪಾಟೀದಾರ್ ಅನಾಮತ್ ಆಂದೋಲನ್ ಸಮಿತಿ ಮುಖ್ಯಸ್ಥ ಹಾರ್ದಿಕ್ ಪಟೇಲ್ ಇಂತಹುದೊಂದು ಗಂಭೀರ ಆರೋಪ ಮಾಡಿದ್ದಾರೆ. ಹಾರ್ದಿಕ್ ಆರೋಪಿಸಿರುವಂತೆ ಗುಜರಾತ್ ನಲ್ಲಿನ ಸುಮಾರು 5000 ಇವಿಎಂ ಮತಯಂತ್ರಗಳನ್ನು ಟ್ಯಾಂಪರ್ ಮಾಡಲು ಬಿಜೆಪಿಯ 140 ಎಂಜಿನಿಯರ್ ಗಳು ಕೆಲಸ ಮಾಡುತ್ತಿದ್ದಾರೆ ಎಂದು ಹಾರ್ದಿಕ್ ಪಟೇಲ್ ಆರೋಪಿಸಿದ್ದಾರೆ. "ಅಹಮದಾಬಾದ್ ನ ಕಂಪನಿಯೊಂದು 140 ಎಂಜಿನಿಯರ್ ಗಳ ಮೂಲಕ 5,000 ಇವಿಎಂಗಳನ್ನು ಹ್ಯಾಕ್ ಮಾಡಲು ಸಜ್ಜಾಗಿದೆ," ಎಂದು ಹಾರ್ದಿಕ್ ಶನಿವಾರ ರಾತ್ರಿ ಟ್ವೀಟ್ ಮಾಡಿದ್ದಾರೆ.
ಹಾರ್ದಿಕ್ ಆರೋಪ ತಳ್ಳಿ ಹಾಕಿದ ಜಿಲ್ಲಾಡಳಿತ
ಇನ್ನು ಹಾರ್ದಿಕ್ ಪಟೇಲ್ ಮಾಡಿರುವ ಆರೋಪವನ್ನು ಅಹಮದಾಬಾದ್ ಜಿಲ್ಲಾಧಿಕಾರಿ ಅವಂತಿಕಾ ಸಿಂಗ್ ತಳ್ಳಿ ಹಾಕಿದ್ದಾರೆ. ಈ ಆರೋಪ ಆಧಾರ ರಹಿತ ಎಂದು ಅವರು ಹೇಳಿದ್ದು, ಈ ಬಗ್ಗೆ ಯಾವುದೇ ಸ್ಪಷ್ಟನೆ ನೀಡಬೇಕಿದ್ದರೂ ಅದು ಚುನಾವಣಾ ಆಯೋಗವೇ ನೀಡಬೇಕು ಎಂದು ಹೇಳಿದ್ದಾರೆ. ಅಂತೆಯೇ ಇದೆಲ್ಲಾ ಆಧಾರ ರಹಿತ ಆರೋಪಗಳು. ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಅನಿಸುತ್ತಿಲ್ಲ. ಒಂದೊಮ್ಮೆ ಸ್ಪಷ್ಟನೆ ನೀಡಬೇಕಿದ್ದರೆ ಚುನಾವಣಾ ಆಯೋಗವೇ ಸ್ಪಷ್ಟನೆ ನೀಡಬೇಕು" ಎಂದು ಅವರು ಹೇಳಿದ್ದಾರೆ.
ಇದರ ಬೆನ್ನಲ್ಲೇ ನಿನ್ನೆ ಸಂಜೆ ಪ್ರತಿಕ್ರಿಯೆ ನೀಡಿರುವ ಹಾರ್ದಿಕ್, "ಎಟಿಎಂಗಳನ್ನು ಹ್ಯಾಕ್ ಮಾಡಬಹುದು. ಹೀಗಾಗಿ ಇವಿಎಂಗಳನ್ನೂ ಹ್ಯಾಕ್ ಮಾಡಬಹುದು. ಒಂದೊಮ್ಮೆ ಯಾವುದೇ ಕ್ಷೇತ್ರಗಳಲ್ಲಿ 1,200 ರಿಂದ 1,500 ಮತಗಳಿಂದ ಜಯ ಸಾಧಿಸಿದಲ್ಲಿ, ಅಲ್ಲಿ ಇವಿಎಂಗಳನ್ನು ಬಳಸಲಾಗಿರುತ್ತದೆ. ಪಾರದರ್ಶಕ ಚುನಾವಣೆ ನಡೆದರೆ ಬಿಜೆಪಿಗೆ ಸೋಲು ಕಂಡಿತ," ಎಂದು ಹೇಳಿದ್ದಾರೆ.
ಇನ್ನು ಇದೇ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಬಿಹಾರ ಸಿಎಂ ನಿತೀಶ್ ಕುಮಾರ್ ಅವರು ಹಾರ್ದಿಕ್ ಅವರ ಆರೋಪಗಳು ಅವರ ಸೋಲಿನ ಭಯವನ್ನು ತೋರಿಸುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ.