ನರೇಂದ್ರ ಮೋದಿ-ಜಿಗ್ನೇಶ್ ಮೇವಾನಿ
ನವದೆಹಲಿ: ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಶಾಸಕನಾಗಿ ಆಯ್ಕೆಯಾಗಿರುವ ದಲಿತ ಮುಖಂಡ ಜಿಗ್ನೇಶ್ ಮೇವಾನಿ ಪ್ರಧಾನಿ ನರೇಂದ್ರ ಮೋದಿ ಅವರು ಆಕ್ಷೇಪಾರ್ಹ ಹೇಳಿಕೆ ನೀಡಿ ಇದೀಗ ವಿವಾದಕ್ಕೆ ಗುರಿಯಾಗಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಈಗ 70ರ ಗಡಿ ತಲುಪುತ್ತಿರುವ ಮುದುಕ. ಅವರು ಸುಮ್ಮನೆ ಯುವಕ ಎಂದು ಹೇಳಿಕೊಳ್ಳುತ್ತಾರೆ. ನಾವು ಯುವಕರು ಈಗ ಮುನ್ನಡೆಯಬೇಕಾಗಿದೆ. ಮೋದಿ ಹಿಮಾಲಯಕ್ಕೆ ತೆರಳಿ ಅಲ್ಲಿಯೇ ಯಾವುದೋ ರಾಮಮಂದಿರವನ್ನು ನೋಡಿಕೊಂಡು ಅರ್ಚಕನಾಗಿ ಗಂಟೆ ಬಾರಿಸಿಕೊಂಡು ಇರಲಿ ಎಂದು ಟೈಮ್ಸ್ ನೌಗೆ ನೀಡಿದ ಸಂದರ್ಶನದಲ್ಲಿ ಜಿಗ್ನೇಶ್ ಮೇವಾನಿ ಮೋದಿ ವಿರುದ್ಧ ಹಗುರವಾಗಿ ಮಾತನಾಡಿದ್ದಾರೆ.
ನಾನು ಗೆದ್ದಿರುವ ವಡ್ಗಾಮ್ ಕ್ಷೇತ್ರದಲ್ಲಿ ಮುಂದಿನ ದಿನಗಳಲ್ಲಿ ಸಾರ್ವಜನಿಕ ರ್ಯಾಲಿಗಳನ್ನು ಕೈಗೊಳ್ಳಲಿದ್ದು ನಂತರ ಎಲ್ಲ ಕಡೆಯಿಂದಲೂ ಪ್ರತಿಭಟನೆಗಳನ್ನು ನಡೆಸಲಾಗುವುದು. ವಿಧಾನಸಭೆಯಲ್ಲೂ ನಾವು ದನಿ ಎತ್ತಲಿದ್ದೇವೆ ಎಂದು ನೇರವಾಗಿಯೇ ಬಿಜೆಪಿ ಹಾಗೂ ಪ್ರಧಾನಿ ಮೋದಿಗೆ ಸವಾಲು ಹಾಕಿದ್ದಾರೆ.
ಪ್ರಧಾನಿ ಮೋದಿ ವಿರುದ್ಧ ಹಗುರವಾಗಿ ಮಾತನಾಡಿರುವ ಜಿಗ್ನೇಶ್ ಮೇವಾನಿಗೆ ಭಾರೀ ವಿರೋಧ ವ್ಯಕ್ತವಾಗಿವೆ. ಸಾಮಾಜಿಕ ಜಾಲತಾಣಗಳಲ್ಲಿ ಮೇವಾನಿ ವಿರುದ್ಧ ಕಟುಟೀಕೆಗಳನ್ನು ಮಾಡಲಾಗುತ್ತಿದೆ.