ದೇಶ

ಜಯಾ ವಿಡಿಯೋ ಪ್ರಸಾರ ನಿಲ್ಲಿಸಿ: ಸುದ್ದಿವಾಹಿನಿಗಳಿಗೆ ಚುನಾವಣಾ ಆಯೋಗ!

Srinivasamurthy VN
ಚೆನ್ನೈ: ಟಿಟಿವಿ ದಿನಕರನ್ ಬಣ ಬಿಡುಗಡೆ ಮಾಡಿರುವ ತಮಿಳುನಾಡು ಮಾಜಿ ಸಿಎಂ ದಿವಂಗತ ಜಯಲಲಿತಾ ಅವರ ವಿಡಿಯೋ ಪ್ರಸಾರ ಮಾಡದಂತೆ ಎಲ್ಲ ಸುದ್ದಿವಾಹಿನಿಗಳಿಗೆ ಮತ್ತು ಸುದ್ದಿ ಪತ್ರಿಕೆಗಳಿಗೆ ಚುನಾವಣಾ ಆಯೋಗ  ಪತ್ರದ ಮೂಲಕ ಮನವಿ ಮಾಡಿಕೊಂಡಿದೆ.
ಜಯಲಲಿತಾ ಅವರ ಸ್ವಕ್ಷೇತ್ರ ಆರ್ ಕೆ ನಗರದಲ್ಲಿನ ಉಪಚುನಾವಣೆಯ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಈ ಹೊತ್ತಿನಲ್ಲಿ ಜಯಾ ವಿಡಿಯೋ ಬಿಡುಗಡೆ ಮಾಡುವ ಮೂಲಕ ಟಿಟಿವಿ ದಿನಕರನ್ ಬಣ ಆಯೋಗದ ಕೆಂಗಣ್ಣಿಗೆ  ಗುರಿಯಾಗಿದೆ. ಇನ್ನು ವಿಡಿಯೋ ಬಹಿರಂಗ ಮೂಲಕ ಟಿಟಿವಿ ದಿನಕರನ್ ಬಣ ಮತದಾರರ ಓಲೈಸಲು ಯತ್ನಿಸಿದೆ ಎಂದು ಆರೋಪಿಸಲಾಗುತ್ತಿದೆ. ಇದೇ ಕಾರಣಕ್ಕೆ ಆಯೋಗ ಕೂಡ ಜಯಾ ಲಲಿತಾ ಅವರ ವಿಡಿಯೋವನ್ನು ಪ್ರಸಾರ  ಮಾಡದಂತೆ ಎಲ್ಲ ವಾಹಿನಿಗಳಿಗೆ ಮತ್ತು ಸುದ್ದಿ ಪತ್ರಿಕೆಗಳಿಗೆ ಸೂಚನೆ ನೀಡಿದೆ.
ಈ ಬಗ್ಗೆ ಆಯೋಗ ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆ ಮಾಡಿದ್ದು, ಪ್ರಕಟಣೆಯಲ್ಲಿ ಆರ್ ಕೆ ನಗರ ಉಪಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಈ ಹೊತ್ತಿನಲ್ಲಿ ಇಂತಹ ವಿಡಿಯೋ ಪ್ರಸಾರ ಮತದಾನ ಪ್ರಕ್ರಿಯೆ ಮೇಲೆ ನೇರ ಮತ್ತು  ಪರೋಕ್ಷ ಪರಿಣಾಮ ಬೀರುತ್ತದೆ. ಅಂತೆಯೇ ಇದು ಚುನಾವಣಾ ನೀತಿ ಸಂಹಿತೆ ಮತ್ತು ಜನಪ್ರತಿನಿಧಿ ಕಾಯ್ದೆ 126 (1) (ಬಿ)ರ ಉಲ್ಲಂಘನೆಯಾಗಿದೆ ಎಂದು ಹೇಳಿದೆ. ಈ ಕಾಯ್ದೆಯಡಿಯಲ್ಲಿ ನೀತಿ ಸಂಹಿತೆ ಜಾರಿಯಾಗಿರುವ  ಹೊತ್ತಿನಲ್ಲಿ ಆಕ್ಷೇಪಾರ್ಹ ರಾಜಕೀಯ ಪಕ್ಷಗಳ ಪರ-ವಿರೋಧ ಸುದ್ದಿಗಳನ್ನು ವಿಡಿಯೋಗಳನ್ನು ಮತ್ತು ಲೇಖನಗಳನ್ನು ಪ್ರಕಟಿಸುವಂತಿಲ್ಲ ಎಂದೂ ಆಯೋಗ ಸ್ಪಷ್ಟಪಡಿಸಿದೆ.
SCROLL FOR NEXT