ದೇಶ

2ಜಿ ಹಗರಣ: ಸತ್ಯಕ್ಕೆ ಸಂದ ಜಯ, ಸರ್ಕಾರ ಉರುಳಿಸಲು ನಡೆಸಿದ್ದ ಷಡ್ಯಂತ್ರ: ಕಾಂಗ್ರೆಸ್

Srinivasamurthy VN
ನವದೆಹಲಿ: 2ಜಿ ಹಗರಣ ಸಂಬಂಧ ದೆಹಲಿಯ ವಿಶೇಷ ಸಿಬಿಐ ನ್ಯಾಯಾಲಯ ಸಾಕ್ಷ್ಯಾಧಾರ ಕೊರತೆ ಹಿನ್ನಲೆಯಲ್ಲಿ ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸಿದ ಬೆನ್ನಲ್ಲೇ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಪಕ್ಷ ಇದು ಸತ್ಯಕ್ಕೆ  ಸಂದ ಜಯ ಎಂದು ಹೇಳಿದೆ.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ ಅವರು, ಯುಪಿಎ ಸರ್ಕಾರ ಉನ್ನತ ಸಚಿವರುಗಳ ವಿರುದ್ಧ ಹೇರಲಾಗಿದ್ದ ಆರೋಪಗಳು ಸುಳ್ಳು ಎಂದು ಸಾಬೀತಾಗಿದೆ. ಸ್ವತಃ  ನ್ಯಾಯಾಲಯವೇ ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸಿದೆ. ಇದು ಸತ್ಯಕ್ಕೆ ಸಂದ ಜಯ ಎಂದು ಹೇಳಿದ್ದಾರೆ.
ಅಂತೆಯೇ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮತ್ತೋರ್ವ ಮಾಜಿ ಕೇಂದ್ರ ಸಚಿವ ಕಪಿಲ್ ಸಿಬಲ್ ಅವರು, ಈ ಹಿಂದೆಯೇ ನಾನು ಹೇಳಿದ್ದೆ. ಯುಪಿಎ ಸರ್ಕಾರದ ಅವಧಿಯಲ್ಲೇ ಯಾವುದೇ ರೀತಿಯ ಭ್ರಷ್ಟಾಚಾರವಾಗಿಲ್ಲ, ಯಾವುದೇ  ಹಗರಣಗಳೂ ಆಗಿಲ್ಲ. ಇವೆಲ್ಲವೂ ಅಂದಿನ ವಿಪಕ್ಷ ಬಿಜೆಪಿ ಹಾಗೂ ವಿನೋದ್ ರಾಯ್ ಅವರ ಷಡ್ಯಂತ್ರವಾಗಿತ್ತು. ಇದೀಗ ಸ್ವತಃ ನ್ಯಾಯಾಲಯವೇ ಆರೋಪಗಳು ಸುಳ್ಳು ಎಂದು ಹೇಳಿದ್ದು, ವಿನೋದ್ ರಾಯ್ ಅವರು ದೇಶ  ಜನತೆಯ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ. 
ಕಾಂಗ್ರೆಸ್ ಮತ್ತೋರ್ವ ಮುಖಂಡ ಶಶಿತರೂರ್ ಅವರು ಈ ಬಗ್ಗೆ ಮಾತನಾಡಿದ್ದು, ಕೋರ್ಟ್ ತೀರ್ಪು ಸತ್ಯಕ್ಕೆ ಸಂದ ಜಯವಾಗಿದೆ. ಅಮಾಕರನ್ನು ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಿಸಲಾಗಿತ್ತು. ನ್ಯಾಯ ಎಂದಿಗೂ ಗೆಲ್ಲುತ್ತದೆ ಎಂಬುದ ಈ  ಪ್ರಕರಣದ ಮೂಲಕ ಸಾಬೀತಾಗಿದೆ ಎಂದು ಹೇಳಿದ್ದಾರೆ. 
ಬೆಂಬಲ ನೀಡಿದ್ದಕ್ಕೆ ಧನ್ಯವಾದ ಹೇಳಿದ ಕನ್ನಿಮೋಳಿ
ಇನ್ನು ತಮ್ಮ ಪರ ಸಿಬಿಐ ವಿಶೇಷ ತೀರ್ಪು ನೀಡುತ್ತಿದ್ದಂತೆಯೇ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬರಾದ ಕನ್ನಿ ಮೋಳಿ ಅವರು, ತಮ್ಮನ್ನು ಬೆಂಬಲಿಸಿದ ಪ್ರತೀಯೊಬ್ಬ ಜನತೆ ಹಾಗೂ ಬೆಂಬಲಿಗರಿಗೆ ಧನ್ಯವಾದ ಹೇಳಿದ್ದಾರೆ.  ಅಂತೆಯೇ ಎಲ್ಲರಿಗೂ ಥ್ಯಾಂಕ್ಸ್ ಹೇಳಲು ಇಚ್ಛಿಸುತ್ತೇನೆ ಎಂದು ಕನ್ನಿಮೋಳಿ ಹೇಳಿದ್ದಾರೆ. 
SCROLL FOR NEXT