ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ
ನವದೆಹಲಿ: 2ಜಿ ತರಂಗಾಂತರ ಅಕ್ರಮ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಿಶೇಷ ನ್ಯಾಯಾಲಯ ನೀಡಿರುವ ತೀರ್ಪನ್ನು ಕಾಂಗ್ರೆಸ್ ತನ್ನ ಪ್ರಾಮಾಣಿಕತೆಯ ಪ್ರತೀಕವೆಂಬಂತೆ ಸಂಭ್ರಮಿಸುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿಯವರು ಗುರುವಾರ ಹೇಳಿದ್ದಾರೆ.
2ಜಿ ಹಗರಣ ಕುರಿತು ನ್ಯಾಯಾಲಯದ ನೀಡಿರುವ ತೀರ್ಪು ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ನ್ಯಾಯಾಲಯ ತೀರ್ಪು ಪ್ರಕಟಿಸಿದ ಬಳಿಕ ಕಾಂಗ್ರೆಸ್ ನಾಯಕರು ತಮ್ಮ ಪ್ರಾಮಾಣಿಕತೆಗೆ ಹಾಗೂ ಗೌರವಕ್ಕೆ ನೀಡಿರುವ ಬ್ಯಾಡ್ಜ್ ಎಂಬಂತೆ ಸಂಭ್ರಮಿಸುತ್ತಿದ್ದಾರೆ. ಕಾಂಗ್ರೆಸ್ ನಾಯಕರು ಈ ರೀತಿ ಖುಷಿ ಪಡಬೇಕಿಲ್ಲ. ಕಾಂಗ್ರೆಸ್ ಎಂದಿಗೂ ಪಾರದರ್ಶಕ ರೀತಿಯಲ್ಲಿ ಹಂಚಿಕೆ ಮಾಡಿಲ್ಲ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಮಾಡಿದ ತರಂಗಗುಚ್ಛ ಹಂಚಿಕೆ ನೀತಿಯೇ ಭ್ರಷ್ಟಾಚಾರದಿಂದ ಕೂಡಿದ್ದಾಗಿದೆ. ಸುಪ್ರೀಂಕೋರ್ಟ್ ಕೂಡ ಪ್ರಕರಣದ ವಿರುದ್ಧ ಕಿಡಿಕಾರಿತ್ತು. ಅಂದಿನ ಸರ್ಕಾರ ತೆಗೆದುಕೊಂಡಿದ್ದ ನೀತಿ ನ್ಯಾಯಯುತವಾಗಿರಲಿಲ್ಲ. ಇದರಿಂದ ಭಾರತ ಸರ್ಕಾರದ ಅತೀವ್ರ ನಷ್ಟ ಎದುರಾಗಿತ್ತು. ಭ್ರಷ್ಟಾಚಾರವನ್ನು ಉತ್ತೇಜಿಸುವ ರೀತಿಯಲ್ಲಿ ನೀತಿಯನ್ನು ವಿನ್ಯಾಸಗೊಳಿಸಲಾಗಿತ್ತು. ನ್ಯಾಯಾಲಯದ ಆದೇಶವನ್ನು ತನಿಖಾ ಸಂಸ್ಥೆ ಕೂಲಂಕುಶವಾಗಿ ಪರಿಶೀಲಿಸಿ ಪ್ರಕರಣ ಸಂಬಂಧ ಮುಂದೇನು ಮಾಡಬಹುದು ಎಂಬುದರ ಬಗ್ಗೆ ಚಿಂತನೆ ನಡೆಸಲಿದೆ ಎಂದು ಭರವಸೆ ಇಟ್ಟಿದ್ದೇನೆಂದು ತಿಳಿಸಿದ್ದಾರೆ.
2ಜಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ಪ್ರಕಟಿಸಿದ್ದು, ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿದೆ. ಹಗರಣದ ಪ್ರಮುಖ ಆರೋಪಿಗಳಾಗಿದ್ದ ಕರುಣಾನಿಧಿ ಪುತ್ರಿ ಕನ್ನಿಮೋಳಿ, ಸಂಬಂಧಿ ಎ ರಾಜಾ ಅವರನ್ನೂ ಸೇರಿದಂತೆ ಸಿಬಿಐ ವಿಶೇಷ ನ್ಯಾಯಾಲಯ ಎಲ್ಲ ಆರೋಪಿಗಳನ್ನು ನಿರಪರಾಧಿಗಳೆಂದು ಖುಲಾಸೆಗೊಳಿಸಿದೆ. ಅಲ್ಲದೆ, ತನಿಖಾ ಸಂಸ್ಥೆ ಮೇಲ್ಮನೆ ಕೋರ್ಟ್ ಗೆ ಆದೇಶ ಪ್ರಶ್ನಿಸಿ ಅರ್ಜಿ ಸಲ್ಲಿಸಿದರೆ, ಎಲ್ಲ ಆರೋಪಿಗಳು 5 ಲಕ್ಷ ಭದ್ರತಾ ಠೇವಣಿ ಇಡುವಂತೆಯೂ ನ್ಯಾಯಾಧೀಶರು ಆದೇಶದಲ್ಲಿ ತಿಳಿಸಿದ್ದಾರೆ.