ನವದೆಹಲಿ: ಬಹುಕೋಟಿ 2 ಜಿ ಹಗರಣದ ತೀರ್ಪು ಪ್ರಕಟವಾಗಿ ಆರೋಪಿಗಳು ಖುಲಾಸೆಯಾಗುತ್ತಿದ್ದಂತೆಯೇ ಬಿಜೆಪಿ ರಾಜ್ಯಸಭಾ ಸಂಸದ, ಹಗರಣವನ್ನು ಬೆಳಕಿಗೆ ತಂದಿದ್ದ ಸುಬ್ರಹ್ಮಣಿಯನ್ ಸ್ವಾಮಿ ಪ್ರತಿಕ್ರಿಯೆ ನೀಡಿದ್ದು ಸರ್ಕಾರ ಕೂಡಲೆ ಮೇಲ್ಮನವಿ ಅರ್ಜಿ ಸಲ್ಲಿಸಬೇಕು ಎಂದು ಹೇಳಿದ್ದಾರೆ.
ಪ್ರಕರಣದ ತೀರ್ಪು ಪ್ರಕಟವಾಗುತ್ತಿದ್ದಂತೆಯೇ ಟ್ವೀಟ್ ಮಾಡಿರುವ ಸುಬ್ರಹ್ಮಣಿಯನ್ ಸ್ವಾಮಿ, ಹಗರಣದ ಬಗ್ಗೆ ಸಿಬಿಐ ಕೋರ್ಟ್ ನೀಡಿರುವ ತೀರ್ಪನ್ನು ಪ್ರಶ್ನಿಸುವ ಮೂಲಕ ಸರ್ಕಾರ ತನ್ನ ದೃಢತೆಯನ್ನು ಪ್ರದರ್ಶಿಸಬೇಕು ಎಂದು ಹೇಳಿದ್ದಾರೆ. ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಅವರ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಆರೋಪಿಗಳನ್ನು ಖುಲಾಸೆಗೊಳಿಸಿದ್ದ ಕರ್ನಾಟಕ ಹೈಕೋರ್ಟ್ ತೀರ್ಪು ಹಾಗೂ ನಂತರದಲ್ಲಿ ಆರೋಪಿಗಳಿಗೆ ಶಿಕ್ಷೆ ವಿಧಿಸಿದ್ದ ಸುಪ್ರೀಂ ನ ತೀರ್ಪನ್ನು ಉದಾಹರಣೆಯಾಗಿ ನೀಡಿರುವ ಸುಬ್ರಹ್ಮಣಿಯನ್ ಸ್ವಾಮಿ, ಆರೋಪಿಗಳು ಈಗ ಬಂದಿರುವ ತೀರ್ಪಿನಿಂದ ಸಂಭ್ರಮಾಚರಣೆ ಮಾಡಬೇಕಿಲ್ಲ ಎಂದು ಹೇಳಿದ್ದಾರೆ.