ಶ್ರೀನಗರ: 2017ರ ಪ್ರಸಕ್ತ ವರ್ಷದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ 117 ಯುವಕರು ಭಯೋತ್ಪಾದಕ ಸಂಘಟನೆಗಳಿಗೆ ಸೇರ್ಪಡೆಗೊಂಡಿದ್ದಾರೆಂಬ ಆತಂಕಕಾರಿ ಮಾಹಿತಿಯೊಂದು ಇದೀಗ ಬಹಿರಂಗಗೊಂಡಿದೆ.
ಕಳೆದ ವರ್ಷಕ್ಕಿಂತಲೂ ಕಾಶ್ಮೀರದಲ್ಲಿ ಉಗ್ರ ಸಂಘಟನೆಗಳಿಗೆ ಯುವಕರನ್ನು ಸೇರ್ಪಡೆಗೊಳಿಸಿಕೊಳ್ಳುವ ಸಂಖ್ಯೆ ಹೆಚ್ಚಾಗಿದ್ದು, ಪ್ರಸಕ್ತ ವರ್ಷದಲ್ಲಿ ಕಾಶ್ಮೀರದಲ್ಲಿನ 117 ಯುವಕರು ಉಗ್ರ ಸಂಘಟನೆಗಳಿಗೆ ಸೇರ್ಪಡೆಗೊಂಡಿದ್ದಾರೆಂದು ಹೇಳಲಾಗುತ್ತಿದೆ.
ಜಮ್ಮು ಮತ್ತು ಕಾಶ್ಮೀರ ಪೊಲೀಸರು ನೀಡಿರುವ ಮಾಹಿತಿಯನ್ವಯ ದಕ್ಷಿಣ ಕಾಶ್ಮೀರವೊದರಲ್ಲೇ 90ಕ್ಕೂ ಹೆಚ್ಚು ಯುವಕರು ಉಗ್ರ ಸಂಘಟನೆಗೆ ಸೇರ್ಪಡೆಗೊಂಡಿದ್ದಾರೆಂದು ತಿಳಿಸಿದೆ. ಉಗ್ರ ಸಂಘಟನೆಗೆ ಸೇರ್ಪಡೆಗೊಂಡಿರುವ ಯುವಕರು ಅನಂತ್ ನಾಗ್, ಪುಲ್ವಾಮ, ಕುಲ್ಗಾಮ್ ಹಾಗೂ ಶೋಪಿಯಾನ್ ಜಿಲ್ಲೆಯ ನಿವಾಸಿಗಳಾಗಿದ್ದಾರೆಂದು ವರದಿಗಳು ತಿಳಿಸಿವೆ.
ಅನಂತ್ ನಾಗ್ ಜಿಲ್ಲೆಯಲ್ಲಿ 12, ಪುಲ್ವಾಮದಲ್ಲಿ 45, ಶೋಪಿಯಾನ್ ಜಿಲ್ಲೆಯಲ್ಲಿ 24 ಹಾಗೂ ಕುಲ್ಗಾಮ್ ನಲ್ಲಿ 10 ಮಂದಿ ಯುವಕರು ಉಗ್ರ ಸಂಘಟನೆಗಳಿಗೆ ಸೇರ್ಪಡೆಗೊಂಡಿದ್ದಾರೆ. ಉತ್ತರ ಕಾಶ್ಮೀರದಲ್ಲಿ ಒಟ್ಟು 17 ಮಂದಿ ಸೇರ್ಪಡೆಗೊಂಡಿದ್ದು, ಉಗ್ರ ಸಂಘಟನೆಗೆ ಸೇರ್ಪಡೆಗೊಂಡ ಯುವಕರು ಕುಪ್ವಾರ, ಬಾರಾಮುಲ್ಲಾ ಹಾಗೂ ಬಂಡಿಪೋರಾದ ಮೂಲದವರಾಗಿದ್ದಾರೆಂದು ಹೇಳಲಾಗುತ್ತಿದೆ.
ಪ್ರಸಕ್ತ ಸಾಲಿನಲ್ಲಿ ಜಮ್ಮು ಮತ್ತು ಕಾಶ್ಮೀರದ ಮೇಲೆ ಉಗ್ರರು ನಡೆಸಿದ ದಾಳಿಗಳನ್ನು ಗಮನಿಸಿದರೆ, ಬಂಡಿಪೋರ ಉಗ್ರರ ಅಡಗುತಾಣವಾಗಿ ನಿರ್ಮಾಣಗೊಂಡಂತಿದೆ. ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಯ ಉಗ್ರರು ಬಂಡಿಪೋರವನ್ನು ತಮ್ಮ ಅಡಗುತಾಣವಾಗಿಕೊಂಡಿದೆ. ಬಂಡಿಪೋರಾದ ಹಜಿನ್ ಎಂಬ ಪ್ರದೇಶದಲ್ಲಿ ಕಳೆದ ತಿಂಗಳು ಭದ್ರತಾ ಪಡೆಗಳು ನಡೆಸಿದ್ದ ಎನ್ ಕೌಂಟರ್ ನಲ್ಲಿ 6 ಮಂದಿ ಎಲ್ಇಟಿ ಉಗ್ರರನ್ನು ಹತ್ಯೆ ಮಾಡಿತ್ತು. ಈ ವೇಳೆ ಬಾರತೀಯ ವಾಯುಪಡೆಯ ಗರುಡ ಕಮಾಂಡೋ ಒಬ್ಬರು ಹುತಾತ್ಮರಾಗಿದ್ದರು.
ಯುವಕರು ಉಗ್ರ ಸಂಘಟನೆಗೆ ಸೇರ್ಪಡೆಗೊಂಡಿರುವ ಕುರಿತಂತೆ ಮಾಹಿತಿ ನೀಡಿರುವ ಪೊಲೀಸ್ ಅಧಿಕಾರಿಗಳು, ಬುರ್ಹಾನ್ ವಾನಿ ಹತ್ಯೆ ಬಳಿಕ ಕಾಶ್ಮೀರದಲ್ಲಿ ನಿರ್ಮಾಣವಾದ ವಾತಾವರಣವೇ ಯುವಕರು ಉಗ್ರ ಸಂಘಟನೆಗಳಿಗೆ ಸೇರ್ಪಡೆಗೊಳ್ಳಲು ಪ್ರಮುಖ ಕಾರಣವಾಗಿದೆ. ಇದರಿಂದ ತಲೆಕೆಡಿಸಿಕೊಳ್ಳಬೇಕಿಲ್ಲ. ಕಾಶ್ಮೀರದಲ್ಲಿ ಈ ವರೆಗೂ ಭದ್ರತಾ ಪಡೆಗಳು ನಡೆಸಿದ್ದ ಕಾರ್ಯಾಚರಣೆಯಲ್ಲಿ 200 ಉಗ್ರರನ್ನು ಹೊಡೆದುರುಳಿಸಲಾಗಿದೆ ಎಂದು ಹೇಳಿದ್ದಾರೆ.
ವಿದ್ಯಾವಂತ ಯುವಕರೇಕೆ ಉಗ್ರ ಸಂಘಟನೆಗಳಿಗೆ ಸೇರ್ಪಡೆಗೊಳ್ಳುತ್ತಿದ್ದಾರೆಂಬುದರ ಬಗ್ಗೆ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಈ ಬಗ್ಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
ಕಳೆದ ವರ್ಷ ಜುಲೈ.8 ರಂದು ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಕಮಾಂಡರ್ ಆಗಿದ್ದ ಬುರ್ಹಾನ್ ವಾನಿಯನ್ನು ಭದ್ರತಾ ಪಡೆಗಳು ಎನ್ ಕೌಂಟರ್ ನಡೆಸಿ ಹತ್ಯೆ ಮಾಡಿತ್ತು. ಬುರ್ಹಾನ್ ವಾನಿ ಹತ್ಯೆಯಾದ ಬಳಿಕ ದಕ್ಷಿಣ ಕಾಶ್ಮೀರದಲ್ಲಿ ಬೆಂಕಿ ಹೊತ್ತು ಉರಿದಿತ್ತು.