ದೇಶ

ಕುಲಭೂಷಣ್ ಜಾದವ್-ಪೋಷಕರ ಭೇಟಿ ಪಾಕ್ ನ ಕ್ರೂರ ಹಾಸ್ಯ, ಕೇವಲ ನಾಟಕ: ದಲ್ಬೀರ್ ಕೌರ್ ಆಕ್ರೋಶ

Srinivasamurthy VN
ನವದೆಹಲಿ: ಕುಲಭೂಷಣ್ ಜಾದವ್ ಮತ್ತು ಅವರ ಪೋಷಕರನ್ನು ನೇರವಾಗಿ ಭೇಟಿ ಮಾಡಲು ಅವಕಾಶ ನೀಡದೇ ಕೇವಲ ಗಾಜಿನ ಮೂಲಕ ನೋಡಲು ಅವಕಾಶ ಮಾಡಿಕೊಡುವ ಮೂಲಕ ಪಾಕಿಸ್ತಾನ ಮತ್ತೊಮ್ಮೆ ತನ್ನ ಕ್ರೂರ  ಮುಖವನ್ನು ಜಗತ್ತಿಗೆ ಪರಿಚಯಿಸಿದೆ ಎಂದು ದಲ್ಬೀರ್ ಕೌರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಕಸ್ಮಿಕವಾಗಿ ಗಡಿ ದಾಟಿ ಪಾಕಿಸ್ತಾನಕ್ಕೆ ತೆರಳಿ ಅಲ್ಲಿ ಬಂಧನಕ್ಕೀಡಾಗಿ ಅಮಾನವೀಯವಾಗಿ ಸಾವನ್ನಪ್ಪಿದ್ದ ಭಾರತೀಯ ಸರಬ್ಡಿತ್ ಸಿಂಗ್ ಅವರ ಸಹೋದರಿ ದಲ್ಬೀರ್ ಕೌರ್, ಕುಲಭೂಷಣ್ ಜಾದವ್ ಪ್ರಕರಣದಲ್ಲಿ ಪಾಕಿಸ್ತಾನದ  ವಿರುದ್ಧ ಮತ್ತೆ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿನ್ನೆ ಕುಲಭೂಷಣ್ ಜಾದವ್ ಮತ್ತು ಅವರ ಪೋಷಕರ ಭೇಟಿ ಕುರಿತಂತೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ದಲ್ಬೀರ್ ಕೌರ್, ಕುಲಭೂಷಣ್ ಜಾದವ್ ಮತ್ತು ಅವರ ಪೋಷಕರ  ಭೇಟಿ ಪ್ರಹಸನ ಪಾಕಿಸ್ತಾನದ ದೊಡ್ಡ ನಾಟಕ. ಗಾಜಿನ ಮೂಲಕ ಪೋಷಕರನ್ನು ತೋರಿಸಿದ್ದು, ಪಾಕಿಸ್ತಾನದ ಕ್ರೂರತೆಗೆ ಹಿಡಿದ ಕನ್ನಡಿಯಾಗಿದ್ದು, ಇದು ಪಾಕಿಸ್ತಾನದ ಕ್ರೂರ ಹಾಸ್ಯ ಎಂದು ದಲ್ಬೀರ್ ಕೌರ್ ಹೇಳಿದ್ದಾರೆ.
ಬಹುಶಃ ಜಾದವ್ ತಾಯಿ ಮತ್ತು ಪತ್ನಿ ಅವರನ್ನು ಕಣ್ಣಾರೆ ನೋಡುವ ಮತ್ತು ಅವರನ್ನು ತಬ್ಬಿಕೊಳ್ಳುವ ಸಲುವಾಗಿ ಭಾರತದಿಂದ ಅಲ್ಲಿಗೆ ತೆರಳಿದ್ದರು. ಆದರೆ ಪಾಕಿಸ್ತಾನ ಇದಕ್ಕೆ ಅವಕಾಶ ಮಾಡಿಕೊಡದೇ ತನ್ನ ಕ್ರೂರತ್ವವನ್ನು  ಮೆರೆದಿದೆ. ತುಂಬಾ ವರ್ಷಗಳ ಬಳಿಕ ಜಾದವ್ ತನ್ನ ತಾಯಿ ಮತ್ತು ಪತ್ನಿಯನ್ನು ನೋಡುತ್ತಿದ್ದು, ಅವರನ್ನು ಗಾಜಿನ ಮೂಲಕ ಪಾಕಿಸ್ತಾನ ಬೇರ್ಪಡಿಸಿದೆ, ಇದು ಜಿನ್ನಾ ಕಟ್ಟಿದ ನಾಡಿನ ಮಾನವೀಯತೆಯ ಪ್ರತೀಕ ಎಂದು ದಲ್ಬೀರ್  ಕೌರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. 
ಪಾಕಿಸ್ತಾನ ಈ ಭೇಟಿಯನ್ನು ಮಾನವೀಯತೆ ಎಂದು ಬಿಂಬಿಸಿಕೊಳ್ಳುತ್ತಿರ ಬಹುದು ಆದರೆ ಇದು ಅದರ ಕ್ರೂರತ್ವದ ಪ್ರತೀಕ ಎಂದು ಜಗತ್ತಿಗೇ ಪರಿಚಯವಾಗಿದೆ ಎಂದೂ ಅವರು ಕಿಡಿಕಾರಿದ್ದಾರೆ.
SCROLL FOR NEXT