ನವದೆಹಲಿ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ಹೆಸರನ್ನು ತಪ್ಪಾಗಿ ಟ್ವೀಟ್ ಮಾಡಿದ ಆರೋಪಕ್ಕೆ ತುತ್ತಾಗಿದ್ದಾರೆ. ರಾಹುಲ್ ಉದ್ದೇಶಪೂರ್ವಕ ಜೇಟ್ಲಿ ಹೆಸರನ್ನು ತಪ್ಪಾಗಿ ಬರೆದಿದ್ದಾರೆ ಎಂದು ಬಿಜೆಪಿ ಸಂಸದರು ರಾಜ್ಯಸಭೆಯಲ್ಲಿ ಅವರ ವಿರುದ್ಧ ನೋಟೀಸ್ ಜಾರಿ ಮಾಡಿದ್ದಾರೆ.
ಬಿಜೆಪಿ ಸಂಸದರಾದ ಭೂಪೇಂದ್ರ ಯಾದವ್ ಈ ಆರೋಪ ಮಾಡಿದ್ದು ಸಭಾಧ್ಯಕ್ಷ, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ತಾವಿದನ್ನು ಪರಿಶೀಲಿಸುವುದಾಗಿ ಹೇಳಿದ್ದಾರೆ.
ಆಗಿದ್ದೇನು: ರಾಹುಲ್ ಗಾಂಧಿ ತಾವು ಮೋದಿ ಸರ್ಕಾರವನ್ನು ಟೀಕಿಸುತ್ತಾ ಪ್ರಧಾನಿ ನರೇಂದ್ರ ಮೋದಿ ಅವರು ಹೇಳುವುದು ಒಂದು, ಆದರೆ ಮಾಡುವುದು ಮತ್ತೊಂದು ಎನ್ನುವುದನ್ನು ನೆನಪಿಸಿದ್ದಕ್ಕೆ ಜೇಟ್ಲಿ ಅವರಿಗೆ ಧನ್ಯವಾದ ಎಂದು ತಮ್ಮ ಟ್ವಿಟ್ಟರ್ ನಲ್ಲಿ ಬುಧವಾದ ಟ್ವೀಟ್ ಮಾಡಿದ್ದರು. ಆ ವೇಳೆ Jaitley ಹೆಸರಿನ ಬದಲಿಗೆ Mr Jaitlie ಎಂದು ತಪ್ಪಾಗಿ ಬರೆದಿದ್ದರು.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿರುದ್ಧ ಸುಳ್ಳು ಆರೋಪ ಮಾಡಿದ್ದ ಮೋದಿ ಕ್ಷಮೆಯಾಚಿಸಬೇಕೆಂದು ಕಾಂಗ್ರೆಸ್ ಅಧಿವೇಶನದಲ್ಲಿ ಪಟ್ಟು ಹಿಡಿದಿತ್ತು. ಈ ವೇಳೆ ಹಣಕಾಸು ಸಚಿವ ಅರುಣ್ ಜೇಟ್ಲಿ ಪ್ರಧಾನಿಗಳ ಹೇಳಿಕೆಗೆ ಸ್ಪಷ್ಟನೆ ಕೊಟ್ಟಿದ್ದರು. ಇದರ ಕುರಿತಂತೆ ರಾಹುಲ್ ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದು ಅದರಲ್ಲಿ ಜೇಟ್ಲಿ ಹೆಸರನ್ನು ತಪ್ಪಾಗಿ ಬರೆದಿದ್ದರು.