ನವದೆಹಲಿ: ಮತದಾರರಿಗೆ ಕೊಡುಗೆಗಳನ್ನು ನೀಡಿ ಆಮಿಷವೊಡ್ಡದಂತೆ ಎಲ್ಲಾ ರಾಜಕೀಯ ಪಕ್ಷಗಳನ್ನು ತಡೆಯಬೇಕು ಎಂದು ಸಲ್ಲಿಸಲಾಗಿದ್ದ ಮನವಿ ಅರ್ಜಿ ಸಂಬಂಧ ದೆಹಲಿ ಹೈಕೋರ್ಟ್, ಭಾರತೀಯ ಚುನಾವಣಾ ಆಯೋಗ ಮತ್ತು ಕೇಂದ್ರ ಸರ್ಕಾರಕ್ಕೆ ನೊಟೀಸ್ ಜಾರಿ ಮಾಡಿದೆ.
ನೊಟೀಸಿಗೆ ಇನ್ನು 8 ವಾರಗಳೊಳಗೆ ಉತ್ತರಿಸುವಂತೆ ಕೋರ್ಟ್ ಹೇಳಿದ್ದು ಮುಂದಿನ ವಿಚಾರಣೆಯನ್ನು ಮೇ 24 ಕ್ಕೆ ಮುಂದೂಡಿದೆ. ಮುಂದಿನ ಎರಡು ತಿಂಗಳಲ್ಲಿ ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಳು ನಡೆಯಲಿರುವ ಹಿನ್ನೆಲೆಯಲ್ಲಿ ಕೋರ್ಟ್ ನೊಟೀಸ್ ನೀಡಿದೆ.
ಮುಖ್ಯ ನ್ಯಾಯಮೂರ್ತಿ ಜಿ.ರೋಹಿಣಿ ಮತ್ತು ನ್ಯಾಯಾಧೀಶ ಸಂಗಿತಾ ದ್ಹಿಂಗ್ರಾ ಸೆಹಗಾಲ್ ಅವರನ್ನೊಳಗೊಂಡ ನ್ಯಾಯಪೀಠ, ಚುನಾವಣಾ ಪ್ರಣಾಳಿಕೆಯಲ್ಲಿರುವ ಮಾರ್ಗಸೂಚಿಗಳು ಈ ಹಿಂದೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶದ ಅನುಸಾರ ಇವೆಯೇ ಎಂದು ವಿವರಿಸುವಂತೆ ಕೂಡ ಚುನಾವಣಾ ಆಯೋಗಕ್ಕೆ ಸೂಚಿಸಿದೆ.
ನ್ಯಾಯಪೀಠ, ನೀವು ಹೊರಡಿಸಿರುವ ಮಾರ್ಗಸೂಚಿಗಳು ಸುಪ್ರೀಂ ಕೋರ್ಟ್ ನಿರ್ದೇಶನದ ಅನುಸಾರವೇ ಇದೆಯೇ ಎಂಬುದನ್ನು ತಿಳಿಸಬೇಕು ಎಂದು ಹೇಳಿದೆ.ದೆಹಲಿ ನಿವಾಸಿ ಅಶೋಕ್ ಶರ್ಮಾ ಅವರು ಸಲ್ಲಿಸಿದ ಅರ್ಜಿ ವಿಚಾರಣೆಯನ್ನು ದೆಹಲಿ ಕೋರ್ಟ್ ನಡೆಸಿತು.
ಮತದಾರರನ್ನು ಸೆಳೆಯುವ ಸಲುವಾಗಿ ಉಚಿತ ಕೊಡುಗೆಗಳನ್ನು ರಾಜಕೀಯ ಪಕ್ಷಗಳು ನೀಡುವುದನ್ನು ತಡೆಯಲು ಚುನಾವಣಾ ಆಯೋಗಕ್ಕೆ ಆದೇಶ ನೀಡಬೇಕೆಂದು ಅವರು ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಮುಂದಿನ ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಉತ್ತರ ಪ್ರದೇಶ, ಪಂಜಾಬ್, ಗೋವಾ, ಮಣಿಪುರ ಮತ್ತು ಉತ್ತರಾಖಂಡಗಳಲ್ಲಿ ಚುನಾವಣೆ ನಡೆಯಲಿದೆ.
2013ರಲ್ಲಿ ಆದೇಶ ಹೊರಡಿಸಿದ್ದ ಸುಪ್ರೀಂ ಕೋರ್ಟ್, ಜನರ ಪ್ರತಿನಿಧಿ ಕಾಯಿದೆಯ ಸೆಕ್ಷನ್ 123ರಡಿ, ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿರುವ ಭರವಸೆಗಳನ್ನು ಭ್ರಷ್ಟಾಚಾರ ಎಂದು ನಿರ್ಬಂಧಿಸಲು ಸಾಧ್ಯವಿಲ್ಲ ಎಂದು ಕಾನೂನು ಹೇಳಿದರೂ ಕೂಡ, ವಾಸ್ತವವಾಗಿ ಉಚಿತ ಕೊಡುಗೆಗಳನ್ನು ಮತದಾರರಿಗೆ ನೀಡಿ ಆಮಿಷವೊಡ್ಡುವುದು ಜನರ ಮೇಲೆ ಮತ್ತು ಚುನಾವಣೆ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿತ್ತು.