ದೇಶ

ರಾಷ್ಟ್ರಪತಿ ಭವನದ ಉದ್ಯಾನೋತ್ಸವ ನಾಳೆ ಉದ್ಘಾಟನೆ, ನಾಡಿದ್ದಿನಿಂದ ವೀಕ್ಷಣೆಗೆ ಮುಕ್ತ

Sumana Upadhyaya
ನವದೆಹಲಿ: ರಾಷ್ಟ್ರಪತಿ ಭವನದ ವಾರ್ಷಿಕ ಉದ್ಯಾನೋತ್ಸವವನ್ನು ಪ್ರಣಬ್ ಮುಖರ್ಜಿಯವರು ನಾಳೆ ಸಾರ್ವಜನಿಕ ವೀಕ್ಷಣೆಗೆ ಮುಕ್ತಗೊಳಿಸಲಿದ್ದಾರೆ.
ಈ ತಿಂಗಳ 5ರಿಂದ ಮಾರ್ಚ್ 12ರವರೆಗೆ ಸೋಮವಾರ ಹೊರತುಪಡಿಸಿ ಉಳಿದ ದಿನಗಳು ಬೆಳಗ್ಗೆ 9.30ರಿಂದ ಸಾಯಂಕಾಲ 4ರವರೆಗೆ ಪ್ರಸಿದ್ಧ ಮುಘಲ್ ಉದ್ಯಾನವನ ತೆರೆದಿರುತ್ತದೆ.
ಸಾರ್ವಜನಿಕರು ಸ್ಪಿರಿಚುವಲ್ ಗಾರ್ಡನ್, ಹರ್ಬಲ್ ಗಾರ್ಡನ್, ಬೊನ್ಸಾಯ್ ಗಾರ್ಡನ್ ಮತ್ತು ಮ್ಯೂಸಿಕಲ್ ಗಾರ್ಡನ್ ಗಳನ್ನು ವೀಕ್ಷಿಸಬಹುದು.
ರಾಷ್ಟ್ರಪತಿ ಎಸ್ಟೇಟ್ ನ ಗೇಟ್ ಸಂಖ್ಯೆ 35ರ ಮೂಲಕ ಸಾರ್ವಜನಿಕರಿಗೆ ಪ್ರವೇಶವಿರುತ್ತದೆ. ಸಾರ್ವಜನಿಕರು ಒಳ ಪ್ರವೇಶಿಸುವಾಗ ನೀರಿನ ಬಾಟಲ್, ಬ್ರೀಫ್ ಕೇಸ್, ಕೈ ಚೀಲ, ಪರ್ಸ್, ಕ್ಯಾಮರಾ, ರೇಡಿಯೋ, ಟ್ರಾನ್ಸಿಸ್ಟರ್, ಬಾಕ್ಸ್ ಗಳು, ಕೊಡೆಗಳು, ತಿನ್ನುವ ವಸ್ತುಗಳನ್ನು ಒಳಗೆ ತೆಗೆದುಕೊಂಡು ಹೋಗುವಂತಿಲ್ಲ. ಯಾವುದಾದರೂ ಅಂತಹ ವಸ್ತುಗಳಿದ್ದಲ್ಲಿ ಪ್ರವೇಶ ದ್ವಾರದಲ್ಲಿ ನೀಡಬೇಕು.
ಕುಡಿಯುವ ನೀರು, ಶೌಚಾಲಯ, ಪ್ರಥಮ ಚಿಕಿತ್ಸೆ, ವೈದ್ಯಕೀಯ ಸೌಲಭ್ಯ, ಹಿರಿಯ ನಾಗರಿಕರು, ಮಹಿಳೆಯರು ಮತ್ತು ಮಕ್ಕಳಿಗೆ ವಿಶ್ರಾಂತಿ ಕೊಠಡಿ ಉದ್ಯಾನವನದ ಒಳಗೆ ಇರುತ್ತದೆ.
ಮಾರ್ಚ್ 10ರಂದು ಮುಘಲ್ ಉದ್ಯಾನವನ ಅಂಗವಿಕಲರು, ರಕ್ಷಣಾ ಮತ್ತು ಅರೆ ಸೇನಾ ಪಡೆ, ರೈತರು, ದೆಹಲಿ ಪೊಲೀಸ್ ಪಡೆ ಸಿಬ್ಬಂದಿ ಭೇಟಿಗೆ ಬೆಳಗ್ಗೆ 9.30ರಿಂದ ಸಂಜೆ 4ರವರೆಗೆ ಮತ್ತು ದೃಷ್ಟಿದೋಷವುಳ್ಳವರಿಗೆ ಬೆಳಗ್ಗೆ 11ರಿಂದ ಸಂಜೆ 4ರವರೆಗೆ ತೆರೆದಿರುತ್ತದೆ. 
SCROLL FOR NEXT