ತಮ್ಮ ಹಕ್ಕು ಚಲಾಯಿಸಿದ ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್
ಚಂಡೀಗಢ: ಕೆಲವೊಂದು ಕಡೆ ಮತಗಟ್ಟೆಯಲ್ಲಿ ತಾಂತ್ರಿಕ ದೋಷ, ಹಿಂಸಾಕೃತ್ಯಗಳನ್ನು ಹೊರತುಪಡಿಸಿ ಪಂಜಾಬ್ ರಾಜ್ಯ ವಿಧಾನಸಭೆ ಚುನಾವಣೆ ಶನಿವಾರ ಶಾಂತಿಯುತವಾಗಿ ಮುಕ್ತಾಯಗೊಂಡಿದ್ದು, ಶೇಕಡಾ 70ರಷ್ಟು ಮತದಾನವಾಗಿದೆ. ಆಡಳಿತಾರೂಢ ಶಿರೋಮಣಿ ಅಕಾಲಿ ದಳ-ಬಿಜೆಪಿ ಮೈತ್ರಿ, ಕಾಂಗ್ರೆಸ್ ಹಾಗೂ ಹೊಸದಾಗಿ ಈ ವರ್ಷ ಸ್ಪರ್ಧೆಗಿಳಿದಿರುವ ಆಪ್ ನಡುವೆ ನೇರ ಹಣಾಹಣಿ ಕಂಡುಬರುತ್ತಿದೆ.
ಕೆಲವೊಂದು ಅಹಿತಕರ ಘಟನೆ ನಡೆದಿರುವುದು ಬಿಟ್ಟರೆ ಮತದಾನ ಶಾಂತಿಯುತವಾಗಿ ನಡೆದಿದೆ ಎಂದು ರಾಜ್ಯ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ವಿ.ಕೆ.ಬ್ಹಾವ್ರಾ ತಿಳಿಸಿದ್ದಾರೆ.
ಸಂಗ್ರೂರ್ ಜಿಲ್ಲೆಯ ಸುಲ್ತಾನ್ ಪುರ ಗ್ರಾಮದಲ್ಲಿ ಆಪ್ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಜಟಾಪಟಿ ನಡೆದದ್ದರಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಟಾರ್ನ್ ಟರನ್ ಜಿಲ್ಲೆಯ ಲಾಲು ಗುಮನ್ ಗ್ರಾಮದಲ್ಲಿ ಮತಗಟ್ಟೆಯ ಹೊರಗೆ ಅಕಾಲಿದಳ ಬೆಂಬಲಿಗರು ಗುಂಡು ಹಾರಿಸಿದ್ದರಿಂದ ಜಗ್ಜೀತ್ ಸಿಂಗ್ ಎಂಬ ಕಾಂಗ್ರೆಸ್ ಕಾರ್ಯಕರ್ತ ಗಾಯಗೊಂಡಿದ್ದಾರೆ.
ಪಂಜಾಬ್ ಎಲೆಕ್ಷನ್ ನಲ್ಲಿ ಇದೇ ಮೊದಲ ಬಾರಿಗೆ ಮತದಾರರ ಪ್ರಮಾಣಿಸಿದ ಕಾಗದದ ಆಡಿಟ್ ಟ್ರಯಲ್ (VVPAT) ಯಂತ್ರಗಳನ್ನು ನಿಯೋಜಿಸಲಾಗಿತ್ತು. ಅದು ಮತದಾನ ನಡೆಯುತ್ತಿದ್ದ ಮಧ್ಯದಲ್ಲಿ ಕೆಟ್ಟು ಹೋಯಿತು.
2012ರ ಚುನಾವಣೆಯಲ್ಲಿ ಶೇಕಡಾ 79 ಮಂದಿ ಮತದಾರರು ಮತ ಚಲಾಯಿಸಿದ್ದರು.
ಮತದಾನ ಮುಗಿದ ಬಳಿಕ ಹೇಳಿಕೆ ಹೊರಡಿಸಿರುವ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ರಾಜ್ಯದ ಜನತೆಗೆ ಧನ್ಯವಾದ ಹೇಳಿದ್ದಾರೆ.
ಒಟ್ಟು 1.98 ಕೋಟಿ ಜನ ಈ ವರ್ಷ ತಮ್ಮ ಹಕ್ಕು ಚಲಾಯಿಸಿದ್ದು, 1,145 ಅಭ್ಯರ್ಥಿಗಳ ಭವಿಷ್ಯ ಬರೆದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics